Book Title: Yasodhara Carita
Author(s): Janna
Publisher: Kannada Sahitya Parishattu

View full book text
Previous | Next

Page 12
________________ ಉಪೋದ್ಘಾತ ಕೇಳಿದಾಗ, ಅವನ ಹಿರಿಮೆಯನ್ನೋ ಕೀಳೆಯನ್ನೋ ಕೇಳಿದಾಗ, ನಾವೂ ಅವನ ಸ್ವರೂಪವನ್ನು ಕಲ್ಪಿಸಿಕೊಳ್ಳುವುದಿಲ್ಲವೆ? ಅದೇ ರೀತಿಯಲ್ಲಿ ಅವಳೂ ಇಂಪಾದ ಹಾಡು ಹಾಡುವವನು ಅತ್ಯಂತ ಸುಂದರವಾಗಿದ್ದಿರಬಹುದೆಂದು ಕಲ್ಪಿಸಿರಬಹುದು. ಅಮೃತಮತಿಯ ಕೆಳದಿ ಅವನನ್ನು ನೋಡಿ ಬಂದು ಆ ರೂಪಾಧಮನ ವರ್ಣನೆಯನ್ನು ಮಾಡಿದಾಗ, ಅಮೃತಮತಿ ಒಮ್ಮೆ ವಿಹ್ವಲೆಯಾದಳು ನಿಜ, ಆದರೆ “ಮೆಚ್ಚಿದವರಿಗೆ ಮಸಣ ಸುಖ' ಎಂಬಂತೆ ಅವಳು 'ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೋಳ್' ಎನ್ನುತ್ತಾಳೆ. ಇನ್ನೂ ಮುಂದುವರಿಸಿ 'ಒಲವಾದೊಡೆ ರೂಪಿನ ಕೋಟಲೆ ಯೇವುದೊ' ಎನ್ನುತ್ತಾಳೆ. ಇದರಿಂದ ಕೂಡ ಯಶೋಧರನ ರೂಪದಲ್ಲಿ ಅವಳಿಗೆ ಒಲವಾಗಿರಲಿಲ್ಲ, ಏಕೆಂದರೆ ಅವನಲ್ಲಿ ಪೊಲ್ಲಮೆಯೆ ಇಲ್ಲ ಎಂದೇ ಹೇಳಿದಂತಾಗುತ್ತದೆ. ಹಾಗೆಂದು ಅವಳಿಗೆ ಆ ವಿಕಟಾಂಗನಲ್ಲಿ ರತಿಫಲಾಸ್ವಾದನದಲ್ಲಿ ರುಚಿಯಾಯಿತಂತೆ! ಅವಳಿಗೆ ಬರಿಯ ಕಾಮತೃಪ್ತಿಯ ಕಡೆಗೆ ಒಲವಿದ್ದಿತೇ ಹೊರತು ರೂಪ-ಗುಣಗಳ ಕಡೆಗೆ ಒಲವಿರಲಿಲ್ಲ. ಆ ತೃಪ್ತಿ ಅಷ್ಟವಂಕನಿಂದ ದೊರೆಯುವ ನಿರೀಕ್ಷೆ ಅವಳದು. ಅಷ್ಟವಂಕನು ಎಷ್ಟು ಕುರುಪಿಯೊ ಮತ್ತು ಎಷ್ಟು ಕುಶ್ಚಿತನೊ ಅಷ್ಟೇ ಕ್ರೂರನೂ ಹೌದು. ಅಮೃತಮತಿ ಈ ಜಾರನಲ್ಲಿಗೆ ಬಂದಾಗ ಒಮ್ಮೆ ವಿಲಂಬವಾದುದಕ್ಕೆ ಆತನು ಅವಳ ಸ್ಥಾನ-ಮಾನ-ರೂಪ-ಯೌವನ ಮುಂತಾದ ಯಾವುದನ್ನೂ ಲೆಕ್ಕಿಸದೆ-ಅವಳ ಮೇಲೆ ಒಂದಿಷ್ಟು ಒಲವಿಲ್ಲದೆ-ಅವಳ ಸೌಕುಮಾರ್ಯವನ್ನು ಗಣನೆಗೆ ತಾರದೆ ಅವಳ “ಕುರುಳಳನೆಳೆದು ಬೆನ್ನ ಮಿಳಿಯಂ ಕಳಹಂಸೆಗೆ ಗಿಡಿಗನೆರಗಿದಂತಿರೆ' ಬಡಿದನು. ಇಷ್ಟೇ ಅಲ್ಲ, ತೋರಮುಡಿವಿಡಿದು ಕುಡಿಯಂ ನಾರಂ ತಗೆವಂತೆ ತದೆದು, ಬೀಟೆಯ ಕಾಲಿಂದ ಬಾರೇಳೆ' ಬದಗನೊದೆದನು. ಇಂತಹ ಕ್ರೂರವೂ ದಯಾಶೂನ್ಯತೆಯೂ ಅವನ ಆಕಾರಕ್ಕೆ, ಸಂಸ್ಕಾರಕ್ಕೆ, ಹುಟ್ಟಿಗೆ ತಕ್ಕುದಾದದ್ದೇ. ಆದರೆ ಅವಳು ಆಗಲೂ ಕೇರೆ ಪೊರಲ್ವಂತೆ ಅವನ ಕಾಲಮೇಲೆ ಪೊರಳಳು. ಅವಳಿಗೆ ಯಶೋಧರನು 'ಅರಸೆಂಬ ಪಾತಕನಾಗಿ ಬಿಟ್ಟಿದ್ದಾನೆ. ಗಜವೆಡಂಗನಾದ ಅಷ್ಟವಂಕನ ದನಿ ಅವಳ ಕಿವಿಗೆ ಸವಿಯಾಗಿಯೂ ಅವನ ರೂಪು ಅವಳ ಕಣ್ಣಿಗೆ ಸವಿಯಾಗಿಯೂ ಇವೆಯೆನ್ನುತ್ತಾಳೆ. ಅವನ ಕರ್ಣಾನಂದಕರವಾದ ಗೀತಕ್ಕೆ ಅವಳು ಸೋತುಹೋದುದು ನಿಜವಾದರೂ, ಆಮೇಲೆ ಅವನ ಗೀತವನ್ನು ಅವಳು ಕೇಳಿದುದಾಗಲಿ, ಅವನು ಹಾಡಿದುದಾಗಲಿ ಇಲ್ಲವೇ ಇಲ್ಲ. ಎಂದಮೇಲೆ ಆಕೆ ಯಶೋಧರನಲ್ಲಿ ಅನುರಕ್ತಿಯಾಗಿ ಇರಲೇ ಇಲ್ಲ; ಅವಳು ಮೊದಲು ಮೋಹಗೊಂಡುದು ಬದಗನ ಹಾಡಿನ ಸಕೃಚ್ಛವಣಕ್ಕೆ; ಅನಂತರ ಅವನ ವಕ್ರಾಕಾರವನ್ನು ಕಣ್ಣಿಗೆ ಸವಿಯೆಂದು ಸಮಾಧಾನ ತಂದುಕೊಂಡುದು ಎಂಬುದನ್ನು ತಿಳಿಯಬಹುದು. ಯಶೋಧರನಿಗೂ ಪೆಣ್ (ಅಮೃತಮತಿ) ತಪ್ಪಿ ನಡೆದಳೆಂದು ಕಂಡಿತಲ್ಲದೆ ಅಷ್ಟವಂಕನಲ್ಲಿ ಅವನು ಅಪರಾಧವನ್ನು ಕಾಣಲಿಲ್ಲ. ಒಮ್ಮೆ ಅವರಿಬ್ಬರನ್ನೂ ಎರಡು ಭಾಗ ಮಾಡಬೇಕೆಂದು ಕತ್ತಿಯೆತ್ತಿದ್ದನಾದರೂ ಅದು ಬರಿಯ ರೋಷದಿಂದ.

Loading...

Page Navigation
1 ... 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 80 81 82 83 84 85 86 87 88 89 90 91 92 93 94 95 96 97 98 99 100 101 102 103 104 105 106 107 108 109 110 111 112 113 114 115 116 117 118 119 120 121 122 ... 536