________________
ನಾಲ್ಕನೆಯ ಅವತಾರ
ರತಿವೆರಸು ಮನಸಿಜಂ ಬನದತಿಶಯಮಂ ನೋಡಲೆಂದು ಬರ್ಪಂತೆ ಯಶೋಮತಿ ಕುಸುಮಾವಳಿವೆರಸುನೃತಪೀತಚ್ಛತ್ರನಂದನಂ ನಡೆತಂದಂ
ಬಾಳಲರ್ಗುಡಿ ಪಿಕರುತಿ ಬಾಯೌಳಿಕೆ ಮಾಂದಳಿರ ಕೆಂಪು ದೀವಿಗೆಯೆನೆ ಭೂ ಪಾಳಂ ಬರೆ ಶೋಧಿಪ ವನಪಾಳನವೊಲ್ ಮುಂದೆ ಬಂದುದಂದು ವಸಂತಂ
ತಳಿರ್ಗಳ ಚಾಳೆಯಮೆಳಲತೆಗಳ ಲುಳಿ ತಿಳಿಗೊಳದ ತೆರೆಯ ತಾಳಂ ಪೊಸವೂಗಳ ನೋಟಮಾಗೆ ನೃಪನಂ ಮಳಯಾನಿಳನೆಂಬ ನಟ್ಟುವ ಕೇಳಿಸಿದಂ
ಅಗೆವೊಯ್ದ ಚಂದ್ರಮಂಡಲದಗೆಗಳವೊಲ್ ಕಾರಮುಗಿಲ ಕಿರಿಗಳವೊಲ್ ಸೊಗಯಿಸಿದುವು ಬೆಳೊಡೆ ಕಂ ಬಗಂಬದೊಳ್ ಕೊಂಬುಗೊಂಬಿನೊಳ್ ಪೆರಿಡಿಗಳ್
೧. ಕಾಮನೂ ರತಿಯೂ ಜತೆಗೂಡಿ ವನದ ಅತಿಶಯವೇನೆಂದು ನೋಡಲು ಬರುವಂತೆ, ಒಮ್ಮೆ ಯಶೋಮತಿ ತನ್ನ ಪತ್ನಿಯಾದ ಕುಸುಮಾವಳಿಯನ್ನೂ ಕೂಡಿಕೊಂಡು ಉದ್ಯಾನವನಕ್ಕೆ ಬಂದನು. ತಲೆಯ ಮೇಲೆ ಉನ್ನತವಾಗಿ ಮೆರೆಯುತ್ತಿದ್ದ ಬಂಗಾರದ ಛತ್ರದಡಿಯಲ್ಲಿ ಸಂತೋಷದಿಂದ ಅವನು ಬಂದನು. ೨. ವಸಂತಕಾಲವೂ ಆಗ ಆಗಮಿಸಿತು. ಹೂವಿನ ಕುಡಿಗಳೇ ಕೈಯ ಕತ್ತಿಯಾಗಿ, ಕೋಗಿಲೆಯ ಕೂಗೇ ವಾಗ್ವಿನೋದವಾಗಿ, ಮಾವಿನ ಚಿಗುರ ಕೆಂಪೇ ದೀಪವಾಗಿ, ಅರಸನು ಬರುವಾಗ ವನವನ್ನೆಲ್ಲ ಸರಿಪಡಿಸುವ ವನಪಾಲಕನಂತೆ ವಸಂತವು ಬಂದಿತು. ೩. ಬೆನ್ನಲ್ಲೇ ಮಲಯಮಾರುತನು ನಟ್ಟುವನಾಗಿ ಕಾಣಿಸಿಕೊಂಡನು. ಚಿಗುರುಗಳ ನೆಗೆತ, ಎಳಲತೆ ಗಳ ಅಲುಗಾಟ, ನಿರ್ಮಲ ಸರೋವರದ ತೆರೆಗಳ ತಾಳ, ಹೊಸಹೂಗಳ ಸುಂದರ ದೃಶ್ಯ ಇವುಗಳಿಂದ ಅವನು ರಾಜನ ಮನಸ್ಸನ್ನು ವಿನೋದಗೊಳಿಸಿದನು. ೪. ಉದ್ಯಾನದ ಪ್ರತಿಯೊಂದು ಕಂಬದಲ್ಲಿಯೂ ಬೆಳೊಡೆ ಸೊಗಸಾಗಿ ತೋರುತ್ತಿತ್ತು. ಅದನ್ನು ಕಾಣುವಾಗ ಚಂದ್ರಮಂಡಲದ ಅಗೆಗಳನ್ನು ಅಲ್ಲಲ್ಲಿ ನೆಟ್ಟಿಟ್ಟಂತೆ ಹೃದಯಂಗಮ ವಾಗಿತ್ತು. ಹಾಗೆಯೇ ಮಳೆಗಾಲದ ಮೋಡಗಳಿಂದ ಮಳೆಹನಿಗಳು ಉದುರಿದಂತೆ ಪ್ರತಿಯೊಂದು ಮರದ ಕೊಂಬೆಯಲ್ಲೂ ದೊಡ್ಡ ದೊಡ್ಡ ಮಿಡಿಗಳು ಶೋಭಿಸುತ್ತಿದ್ದವು.