________________
ಉಪೋದ್ಘಾತ
“ಜೀವದಯೆ ಜೈನಧರ್ಮಂ” ಎಂಬುದರಲ್ಲಿ ಗಟ್ಟಿಮಾಡಿಕೊಂಡಿದ್ದವನಿಗೆ ತಾಯಿಯ ಹಿಂಸಾಬುದ್ದಿಯನ್ನು ನಿವಾರಿಸಲಾಗಲಿಲ್ಲವೆ ? ಆಗಿತ್ತು ಎನ್ನೋಣ. ಏಕೆಂದರೆ ಅವಳು ಹಿಟ್ಟಿನ ಕೋಳಿಯನ್ನು ಬಲಿಯಿತ್ತರೆ ಸಾಕು ಎಂಬಲ್ಲಿಯವರೆಗೆ ಬಂದಿದ್ದಳು. ಆದರೆ ಯಶೋಧರನ ಮಗ ಯಶೋಮತಿಗೆ ಹಿಂಸಾ ಬುದ್ದಿಯೇ ಇರುವುದನ್ನು ಕಾಣುವಾಗ ಅವನು ಇತರರನ್ನು ತಿದ್ದುವುದರಲ್ಲಿ ಸಮರ್ಥನಾಗಿದ್ದನೆನ್ನುವುದಕ್ಕೆ ಆಧಾರ ಸಾಕಾಗದು. ಅಥವಾ “ಮಾತೃದೇವ'ನಾಗಿ ತಾಯಿಯ ಮಾತಿಗೆ ಅನುಮೋದನೆಯಿತ್ತನೆಂದರೆ 'ಗುರೋರಪ್ಯವಲಿಪ್ತಸ್ಯ ಕಾತ್ಯಾಕಾರಮಜಾನತಃ | ಉತ್ಪಥಂ ಪ್ರತಿಪನ್ನಸ್ಯ ಕಾಡ್ಯಂ ಭವತಿ ಶಾಸನಂ' 11* (ಕಾರಾಕಾರಗಳನ್ನು ತಿಳಿಯದ ಹಾಗೂ ಸನ್ಮಾರ್ಗವನ್ನು ಮೀರಿದ ಗರ್ವಿಷ್ಠನಾದ ಗುರುವಿಗೂ ಶಿಕ್ಷೆಯನ್ನು ಮಾಡಬೇಕು) ಎಂಬುದಕ್ಕೆ ಬೆಲೆಯೇ ಇಲ್ಲವೆಂದಾಗುತ್ತದೆ. ಕಾರಾಕಾರ ವಿವೇಚನೆಯಿಲ್ಲದೆ, ತಾಯಿ ಹೇಳಿದ್ದಾಳೆಂದು ಅವನು ನಡೆದುದು ಅವನ ದೌರ್ಬಲ್ಯದ ಅಥವಾ ಅವಿಚಾರಿತಕೃತ್ಯದ ದ್ಯೋತಕವಾಗುತ್ತದೆ.
'ಯಶೋಧರ ಚರಿತೆ'ಯಲ್ಲಿ ಬರುವ ಇನ್ನೊಂದು ತೊಡಕು ಹೀಗಿದೆ: ಯಶೋಧರನೂ ಚಂದ್ರಮತಿಯೂ ಕೋಳಿಗಳಾಗಿ ಆರನೆಯ ಜನ್ಮದಲ್ಲಿದ್ದ ಕಾಲದಲ್ಲಿಯೇ ಚಂಡಕರ್ಮನು ವ್ರತವನ್ನು ಧರಿಸಿದನು. ಕುಕ್ಕುಟಜನವನ್ನು ಕಳೆದು, ಅಭಯರುಚಿ ಅಭಯಮತಿಗಳಾಗಿ ಹುಟ್ಟಿ ಕೆಲವು ವರ್ಷಗಳು ಸಂದಮೇಲೆ ಮಾರಿದತ್ತನು ನಡೆಯಿಸುತ್ತಿದ್ದ ಮಾರಿದೇವತೆಯ ಬಲಿಗಾಗಿ ಆ ಮನುಷ್ಯಯುಗಲವನ್ನು ಅದೇ ಚಂಡಕರ್ಮನು ತರುತ್ತಾನೆ. ಇದರಿಂದ ಅವನು ವ್ರತಭಂಗದ ಪಾಪಕ್ಕೂ ಒಳಗಾಗುವುದಿಲ್ಲವೇ ? ಅವನಿಗೇನು ಗತಿಯಾಯಿತೆಂದು ಕೃತಿಯಲ್ಲಿಲ್ಲ.*
ಮಾರಿದತ್ತರಾಜ ತನ್ನ ಸೋದರಳಿಯ-ಸೊಸೆಯರ ಗುರುತೂ ಇಲ್ಲದವನಂತೆ ಕಾವ್ಯದಲ್ಲಿ ಚಿತ್ರಿತನಾಗಿದ್ದಾನೆ. ಇದು ಸುಸಂಗತವೆನ್ನಿಸೀತೆ ? ರಾಜ್ಯಕಾರದಲ್ಲಿ ಮಗ್ನನಾಗಿದ್ದ ಕಾರಣ ಅವನಿಗೆ ತನ್ನ ಸೋದರಿಯ ಮಕ್ಕಳ ವಿಷಯವೂ ಗೊತ್ತಾಗಿರಲಿಲ್ಲ ಎನ್ನಬಹುದೇ ? ಅವನಿಗೂ ಯಶೋಮತಿಗೂ ವಿರಸತೆಯುಂಟಾಗಿ ಹಾಗಾಯಿತೆ ? ಕುಸುಮಾವಳಿಗಾದರೂ ತನ್ನ ಸೋದರ ಮಾರಿದತ್ತನ ಮೇಲೆ ದ್ವೇಷವಿತ್ತೆ? ಇವೆಲ್ಲ ಪ್ರಶ್ನೆಗಳಿಗೆ ಸರಿಯಾದ ಸಮಾಧಾನವೇನಿದೆಯೊ ಹೇಳಬರುವುದಿಲ್ಲ.
* ವಾಲ್ಮೀಕಿರಾಮಾಯಣ-ಅಯೋಧ್ಯಾಕಾಂಡ; ಸರ್ಗ ೨೧.-ಶೇ ೧೩.
* ಈ ಸಮಸ್ಯೆಗೆ ಸಮಾಧಾನ ಹೇಳಬೇಕಾದರೆ ಮಾರಿದತ್ತನ ಬಳಿಯಿದ್ದ ಚಂಡಕರ್ಮನೂ ಯಶೋಮತಿಗೆ ಕೋಳಿಗಳನ್ನು ಕಾಣಿಕೆಕೊಟ್ಟ ಚಂಡಕರ್ಮನೂ ಬೇರೆ ಬೇರೆ ವ್ಯಕ್ತಿಗಳೆಂದು ತಿಳಿದುಕೊಳ್ಳಬೇಕು. ತಳಾರಿಕೆಯನ್ನು ವಹಿಸಿದವರಿಗೆಲ್ಲ 'ಚಂಡಕರ್ಮ' ಎಂಬ ಹೆಸರನ್ನು ಪ್ರಯೋಗಿಸುವ ಪದ್ಧತಿ ಇತ್ತೋ ಏನೋ. ನಮ್ಮೂರಲ್ಲಿ 'ಭೂತ'ದ ಪಾತ್ರಿಯಾಗುವವನಿಗೆ ಪರಂಪರೆಯಿಂದ ಒಂದೇ ಹೆಸರಿರುವುದು ಪದ್ಧತಿ. ಕೃತಿಯಲ್ಲಿ ಇಬ್ಬರು ಚಂಡಕರ್ಮರಿದ್ದರೆಂದು ಸ್ಪುಟವಾಗಿ ಎಲ್ಲಿಯೂ ಹೇಳಿಲ್ಲವಾದರೂ ಪ್ರಕರಣದಿಂದ ಹಾಗೆ ತಿಳಿದುಕೊಂಡರೆ ತಪ್ಪಾಗದು.