Book Title: Universal Values of Prakrit Texts
Author(s): Prem Suman Jain
Publisher: Bahubali Prakrit Vidyapeeth and Rashtriya Sanskrit Sansthan
View full book text
________________
ವ್ಯಾಖ್ಯಾನದ ಸರಪಣಿಯಲ್ಲಿ ನೀತಿ ಅಥವಾ ಯಾವುದೋ ತಥ್ಯವನ್ನು ಪುಷ್ಟಿಗೊಳಿಸುವುದೇ ಆಗಿದೆ. ಆಗಮಕಾಲದ ಕಥೆಗಳು ಸಾಂಪ್ರದಾಯಿಕ ಧಾರ್ಮಿಕತೆಯಿಂದ ಅಭಿಭೂತವಾಗಿದ್ದವು - ವಶೀಭೂತವಾಗಿದ್ದವು ಅವುಗಳಲ್ಲಿ ಮನೋರಂಜನೆ ಮತ್ತು ಕುತೂಹಲವು ಬಹುಶಃ ಇಲ್ಲವಾಗಿದ್ದವು. ಕೇವಲ ಕೆಲವು ಘಟನೆಗಳ ಶೃಂಖಲೆಯೇ ಯಾವುದೋ ಚರಿತ್ರದ ಅಥವಾ ನಿಷೇಧದ ರೂಪವನ್ನು ಪ್ರಸ್ತುತ ಮಾಡುತ್ತಿದ್ದವು, ಆದರೆ ಟೀಕಾಯುಗದ ಪ್ರಾಕೃತ ಕಥೆಗಳಲ್ಲಿ 'ಕಥಾರಸ' ಚೆನ್ನಾಗಿ ಮಿಳಿತವಾದವು. ಆಕಾರ-ಪ್ರಕಾರವು ಸಹ ಚಿಕ್ಕದಾಯಿತು. ಹಾಗೂ ವಿಭಿನ್ನ ವಿಷಯಗಳ ಸಂಬಂಧವೇರ್ಪಟ್ಟ ಕಾರಣ ಅವುಗಳಲ್ಲಿ ಅನೇಕರೂಪತೆ ಕಂಡುಬಂದಿತು. ಐತಿಹಾಸಿಕ, ಅರ್ಧ-ಐತಿಹಾಸಿಕ ಹಾಗೂ ಪೌರಾಣಿಕ ಪ್ರವೃತ್ತಿಗಳ ಉದ್ಘಾಟನೆಯು ಸಹ ಆರಂಭಗೊಂಡಿತು.
ಪಾದಲಿಪ್ತ ಸೂರಿಯ 'ತರಂಗವತೀ' ಕಾವ್ಯದಿಂದ ಪ್ರಾಕೃತದ ವಿಶುದ್ದ ಕಥಾಸಾಹಿತ್ಯ ಪ್ರಾರಂಭವಾಯಿತೆಂದೆ ತಿಳಿಯಲಾಗಿದೆ. ಚರಿತಾತ್ಮಕ ಕಥಾಗ್ರಂಥದ ರೂಪದಲ್ಲಿ ಸಂಘದಾಸಗಣಿವಾಚಕ ಮತ್ತು ಧರ್ಮಸೇನಗಣಿಯ 'ವಸುದೇವ ಹಿಂಡಿ' ಯ ಹೆಸರು ಬರುತ್ತದೆ. ಇದು ಗುಣಾಡ್ಯನ ಬೃಹತ್ಕಥೆ'ಗೆ ಸಮಾನವಾದ ಕಥಾಕೋಶವಾಗಿದೆ. ಇದು ಪ್ರಾಕೃತ ಕಾವ್ಯ ಹಾಗೂ ಕಥೆಯ ವಿಕಾಸಕ್ಕೆ ಮೂಲನೆಲೆಯ ಗ್ರಂಥವಾಗಿದೆ. ಇದರ ನಂತರ ವಿಮಲಸೂರಿಯ 'ಪಉಮಚರಿಯ' ಮೊದಲಾದ ಅನೇಕ ಚರಿತ ಗ್ರಂಥಗಳು ಕಂಡುಬರುತ್ತವೆ. ಇವುಗಳಲ್ಲಿ 'ಕಥಾರಸ' ದ ದೃಷ್ಟಿಗಿಂತ 'ಚರಿತ' ವೇ ಪ್ರಧಾನವಾಗಿದೆ. ಆದ್ದರಿಂದ ಇವುಗಳನ್ನು ವಿಶುದ್ಧ ಕಥಾಕೃತಿಗಳ ಸಾಲಿನಲ್ಲಿ ವಿಶೇಷವಾಗಿ ಪರಿಗಣಿಸುವುದಿಲ್ಲ.
'ತರಂಗವತೀ' ಯ ನಂತರ ವಿಶುದ್ದ ಕಥಾಸಾಹಿತ್ಯವನ್ನು ಹರಿಭದ್ರ ಸೂರಿಯ 'ಸಮರಾಇಚ್ಚಕಹಾ'ದಲ್ಲಿ ಕಾಣುತ್ತೇವೆ. ಇದೇ ಹರಿಭದ್ರಸೂರಿಯ 'ಧೂರ್ತಾಖ್ಯಾನ' ವ್ಯಂಗ್ಯ ಪ್ರಧಾನ ಕಥಾ ರಚನೆಯಾಗಿದೆ. ಕೌತೂಹಲ ಕವಿಯ 'ಲೀಲಾವತ', ಉದ್ಯೋತನ ಸೂರಿಯ 'ಕುಮಲಯ ಮಾಲಾ', ಜಿನೇಶ್ವರ ಸೂರಿಯ 'ನಿರ್ವಾಣ ಲೀಲಾವತೀ', ಜಿನೇಶ್ವರ ಸೂರಿಯ 'ಕಥಾಕೋಷ ಪ್ರಕರಣ', ಜಿನಚಂದ್ರನ 'ಸಂವೇಗರಂಗಶಾಲಾ', ಮಹೇಶ್ವರ ಸೂರಿಯ 'ನಾಣಪಂಚಮೀ ಕಹಾ' ದೇವಭದ್ರಸೂರಿಯ 'ಕಹಾ-ರಯಣ-ಕೋಸ', ನೇಮಿಚಂದ್ರ ಸೂರಿಯ 'ಆಖ್ಯಾನಮಣಿಕೋಶ', ಸುಮತಿ ಸೂರಿಯ 'ಜಿನದತ್ತಾಖ್ಯಾನ', ಮಹೇಂದ್ರಸೂರಿಯ “ನರ್ಮದಾಸುಂದರಿ ಕಹಾ', ಸೋಮಪ್ರಭ ಸೂರಿಯ 'ಕುಮಾರಪಾಲ ಪ್ರತಿಬೋಧ', ಅಜ್ಞಾತ ಕರ್ತೃವಿನ 'ಪ್ರಾಕೃತ ಕಥಾ ಸಂಗ್ರಹ', ರತ್ನಶೇಖರ ಸೂರಿಯ 'ಸಿರಿವಾಲಕಹಾ' (ಶ್ರೀಪಾಲ ಕಥಾ), ಜಿನಹರ್ಷಸೂರಿಯ “ರಯಣ-ಸೇಹರ- ನಿವ-ಕಹಾ' (ರತ್ನ ಶೇಖರವ್ರತ ಕಥಾ), ವೀರದೇವ ಗಣಿಯ 'ಮಹೀಪಾಲಕಹಾ' - ಈ ಮೊದಲಾದ ಪ್ರಮುಖ ಪ್ರಾಕೃತ ಕಥಾಕೃತಿಗಳಲ್ಲದೆ, ಸಂಘದಾಸ ತಿಲಕ ಸೂರಿಯು 'ಆರಾಮಸೋಹಾ ಕಹಾ' ಮೊದಲಾದ ಕಥೆಗಳನ್ನು ಬರೆದಿದ್ದಾರೆ. ದೇವಚಂದ್ರ ಸೂರಿಯ 'ಕಾಲಿಕಾಚಾರ್ಯ ಕಥಾನಕ' ಹಾಗೂ ಅಜ್ಞಾತ ಕವಿಯ 'ಮಲಯಸುಂದರ ಕಥೆ' ಯು ಸಹ ಸುಂದರ ರಚನೆಗಳಾಗಿವೆ.
-289 -
Jain Education International
For Private & Personal Use Only
www.jainelibrary.org