________________
ಉಪೋದ್ಘಾತ | ೧೯ ಗರ್ವಮೆನಗಿಲ್ಲ' ಎಂದು ಪಂಪನು ಹೇಳಿರುವುದರಿಂದ ಇವನಿಗೆ ಹಿಂದೆ ಕವಿವ್ಯಾಸನೆಂಬುವನೊಬ್ಬನಿದ್ದು ಭಾರತವನ್ನು ರಚಿಸಿರಬಹುದು. ಆದರೆ ನಮಗೆ ದೊರೆತಿರುವ ಪುರಾತನ ಸಮಗ್ರ ಕನ್ನಡ ಭಾರತ 'ವಿಕ್ರಮಾರ್ಜುನವಿಜಯ'ವೊಂದೇ.
ಪಂಪನಿಗೆ ಧಾರ್ಮಿಕಪುರಾಣವಾದ 'ಆದಿಪುರಾಣ'ಕ್ಕಿಂತ ಲೌಕಿಕಕಾವ್ಯವಾದ 'ವಿಕ್ರಮಾರ್ಜುನ ವಿಜಯ'ದ ರಚನೆಯಲ್ಲಿ ಹೆಚ್ಚು ಸ್ವಾತಂತ್ರ್ಯವಿದೆ. ಅವನ ಪ್ರತಿಭಾಪ್ರಸರಣಕ್ಕೆ ಇಲ್ಲಿ ಹೆಚ್ಚಿನ ಅವಕಾಶವಿದೆ. ಅವನ ಅನಾದೃಶವಾದ ಲೋಕಾನುಭವಸಂಪತ್ತನ್ನು ಪ್ರದರ್ಶಿಸುವ ಗ್ರಂಥವಿದು. ತನ್ನ ಪೋಷಕನಾದ ಅರಿಕೇಸರಿಯ ಕೀರ್ತಿಯನ್ನು ಸ್ಥಿರಪಡಿಸುವುದಕ್ಕಾಗಿಯೂ 'ಸಮಸ್ತ ಭಾರತಮನಪೂರ್ವಮಾಗೆ ವರ್ಣಕಂ ಕತೆಯೊಳೊಡಂಬಡಂ ಪಡೆಯೆ ಪೇಳ್ಕೊಡೆ ಪಂಪನೆ ಪೇಟ್ಟಂ' ಎಂದು ಒತ್ತಾಯ ಮಾಡಿದ ಪಂಡಿತರನ್ನು ಸಂತೋಷಪಡಿಸುವುದಕ್ಕಾಗಿಯೂ ಭಾರತದ ಕಥಾವಸ್ತುವನ್ನು ಆ ಕಾಲದ ವಾತಾವರಣಕ್ಕೆ ಹೊಂದುವಂತೆ ವೀರರಸದಲ್ಲಿ ಎರಕ ಹೊಯ್ದು ಕಾವ್ಯಕ್ಕೆ ತಕ್ಕಂತೆ ಕಥೆಯನ್ನು ಮಾರ್ಪಡಿಸಿ ಕನ್ನಡ ಸಾಹಿತ್ಯದೇವಿಗೆ 'ವಿಕ್ರಮಾರ್ಜುನ ವಿಜಯ'ವೆಂಬ ಒಂದು ರತ್ನಕಂಠಿಯನ್ನು ನಿರ್ಮಿಸಿದನು. ಹೀಗೆ ಅರಿಕೇಸರಿಯ ಕೀರ್ತಿಯನ್ನು ಬೆಳಗುವುದಕ್ಕೆ ಹೊರಟಿದ್ದುದರಿಂದಲೂ 'ಬೆಳಗುವೆನಿಲ್ಲಿ ಲೌಕಿಕ ವಂ' ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡುದರಿಂದಲೂ ಪಂಪನು ತನ್ನ ಭಾರತವನ್ನು ಮೂಲಭಾರತದ ಕಥೆಯಂತೆ ನಡೆಸಲು ಸಾಧ್ಯವಿಲ್ಲದೆ ತನ್ನ ಪ್ರತಿಭಾಶಕ್ತಿಯಿಂದ ಕಥೆಯನ್ನು ಕುಗ್ಗಿಸಿಯೂ ಹಿಗ್ಗಿಸಿಯೂ ಮಾರ್ಪಡಿಸಿಯೂ ಕೆಲವೆಡೆಯಲ್ಲಿ ಅಜ್ಞಾತವಾಗಿ ಜೈನಸಂಪ್ರದಾಯಕ್ಕೆಳೆದೂ ಇದ್ದಾನೆ. ಹೀಗೆ ಮಾಡುವುದರಲ್ಲಿ ವಿಸ್ತರಣೆಯಿಂದ ಕೆಲವೆಡೆಗಳಲ್ಲಿ ಮುಗ್ಗರಿಸಿರುವುದೂ ಉಂಟು. ಮತ್ತೆ ಕೆಲವೆಡೆಗಳಲ್ಲಿ ಮೂಲಭಾರತದ ಕಥೆಗೆ ಮತ್ತಷ್ಟು ಮಿರುಗುಕೊಟ್ಟು ಹೊಳೆಯುವಂತೆಯೂ ಮಾಡಿರುವನು.
ಪಂಪಭಾರತ 'ಸಮಸ್ತ ಭಾರತ'. ಇದನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದು. ಅದು ಸಂಪೂರ್ಣ ಅಥವಾ ಸಮಗ್ರಭಾರತ ಎಂಬುದು ಅದರ ಮೊದಲನೆಯ ಅರ್ಥ. ಮೂಲಭಾರತದ ಕಥೆಯ ವಾತಾವರಣಕ್ಕೆ ತನ್ನ ಕಾಲದ ವಾತಾವರಣವನ್ನು ಹೊಂದಿಸಿ ಹೇಳಿರುವುದು ಎಂಬುದು ಮತ್ತೊಂದರ್ಥ. ಹಾಗೆಯೇ ಭಾರತದಲ್ಲಿ ಕಥೆಯ ಜೊತೆಗೆ ತನ್ನ ಪ್ರಭುವಿನ ಕಥೆಯನ್ನೂ ಹಾಸುಹೊಕ್ಕಾಗಿ ಕೂಡಿಸಿ ಕಥಾರಚನೆ ಮಾಡಿರುವ ಗ್ರಂಥ ಎಂಬುದು ಮೂರನೆಯ ವ್ಯಾಖ್ಯಾನ, ಈ ಕೊನೆಯ ಅರ್ಥವು ಹೆಚ್ಚು ಆದರಣೀಯವಾಗಿದೆ. ಅದನ್ನು ಸಮನ್ವಯಗೊಳಿಸುವುದಕ್ಕಾಗಿ ಪಂಪನು ತನ್ನ ಕತೆಗೆ ನಾಯಕರನ್ನು ಆರಿಸುವುದರಲ್ಲಿ ಬಹಳ ಜಾಣೆಯನ್ನು ತೋರಿಸಿದ್ದಾನೆ. ವ್ಯಾಸಭಾರತದ ಪ್ರಕಾರ ಮೇಲುನೋಟಕ್ಕೆ ಧರ್ಮರಾಜನೇ ನಾಯಕನೆಂದು ಕಂಡು ಬಂದರೂ ಪಂಚಪಾಂಡವರಲ್ಲಿ ಒಬ್ಬೊಬ್ಬರೂ ಒಂದೊಂದು ದೃಷ್ಟಿಯಿಂದ ಪ್ರಮುಖರಾಗಿ ನಾಯಕಸ್ಥಾನಕ್ಕೆ ಅರ್ಹರಾಗುತ್ತಾರೆ. ಆದುದರಿಂದ ಪಂಪನು ಬಹುವಿವೇಕದಿಂದ ಪಾಂಡವ ಮಧ್ಯಮನೂ ಅತುಲ ಪರಾಕ್ರಮಿಯೂ ಆದ ಅರ್ಜುನನನ್ನು ನಾಯಕನನ್ನಾಗಿ ಮಾಡಿ