________________
೮೪
ಯಶೋಧರ ಚರಿತೆ ಕಲ್ಪನೆ. ಅಂತಹ ಕೇತುವಿನೊಡನೆ ಈ ಕೇತುಗಳು ಮೈತ್ರಿಯನ್ನು ಪಡೆದಿವೆ ಎಂದರೆ ಇಲ್ಲಿನ ಧ್ವಜಗಳು ಬಹಳ ಎತ್ತರದಲ್ಲಿ ಶೋಭಿಸುತ್ತವೆ ಎಂದು ತಾತ್ಪರ್ಯ.
೧೫. ವಸಂತದ ಚೈತ್ರಮಾಸವು ಬಂದಾಗ ಶುಕ್ಲಪಕ್ಷದಲ್ಲಿ ಚಂದ್ರನು ಮೂಡಿಕೊಂಡು ಬರುತ್ತಾನೆ; ಅಶೋಕದ ಮರವು ಚಿಗುರಿ ಕೆಂಬಣ್ಣವನ್ನು ಹಬ್ಬಿಸುತ್ತದೆ; ಕೋಗಿಲೆಗಳು ಕೂಗತೊಡಗುತ್ತವೆ. ಪ್ರಕೃತಿಯ ಈ ಸ್ಥಿತಿಯನ್ನೇ ಕವಿ ಆಲಂಕಾರಿಕವಾಗಿ ಬಣ್ಣಿಸುತ್ತಾನೆ. ದೇವತೆಯ ತೃಪ್ತಿಗಾಗಿ ಪ್ರಾಣಿಗಳನ್ನು ಬಲಿಕೊಡುವಾಗ ಕೆಲವನ್ನು ತಲೆಗೆ ಗಾಳಹಾಕಿ ತೂಗಾಡಿಸುವುದು, ಕೆಲವನ್ನು ಬೆಂಕಿಯಲ್ಲಿ ಹಾಕಿ ಸುಡುವುದು (ಇದಕ್ಕಾಗಿ ಬೆಂಕಿಯನ್ನು ಸಿದ್ಧಪಡಿಸುವುದು) ಗಟ್ಟಿಯಾಗಿ ಆರ್ಭಟಿಸುವುದು ನಡೆಯುತ್ತವೆ. ಇವುಗಳನ್ನು ಅನುಕ್ರಮವಾಗಿ ಇಲ್ಲಿ ಸೂಚಿಸಲಾಗಿದೆ.
೧೬. ವಸಂತದಲ್ಲಿ ಮುತ್ತುಗಗಳು ಹೂಬಿಡುತ್ತವೆ; ಮಾವಿನ ಮರಗಳೂ ಹೂ ಬಿಡುತ್ತವೆ. ಮಾವಿನ ಮರಗಳ ಬಳಿಯಲ್ಲೇ ಮುತ್ತುಗದ ಹೂಗಳು ಉದುರಿಬಿದ್ದುದನ್ನು ಕಾಣುವಾಗ ವಸಂತನು ತನ್ನ ಹಿಂದೆ ಅರಸುತನ ಮಾಡುತ್ತಿದ್ದ ಶಿಶಿರ (ಚಳಿಗಾಲ)ವನ್ನೆ ಹಿಡಿದು, ಆ ಶಿಶಿರನ ಅಂಗಾಂಗಗಳನ್ನು ಕೊಚ್ಚಿ ಆ ಮಾಂಸವನ್ನು ಈ ರೀತಿ ಹರಕೆಯೊಪ್ಪಿಸಿದನೋ ಎಂಬಂತೆ ಭಾಸವಾಗುತ್ತದೆ ಎಂದು ಕವಿ ಇಲ್ಲಿ ಉತ್ತೇಕ್ಷಿಸುತ್ತಾನೆ.
೧೭. ಚೈತ್ರದಲ್ಲಿ ಗಿಳಿಗಳು ಕೂಗುವುದೂ, ತೆಂಕಣಗಾಳಿ ಬೀಸುವುದೂ ತಾವರೆಗಳು ಅರಳುವುದೂ ಸಹಜ. ಈ ತಾವರೆಗಳು ಕೆಂಪು ಬಣ್ಣದವುಗಳಾಗಿದ್ದು ಉರಿಯುವ ಕೆಂಡಗಳಂತೆ ತೋರುತ್ತವೆ. ದೇವಿಯ ಸೇವೆಯನ್ನು ಮಾಡುವಲ್ಲಿ ಕೆಂಡದ ಮೇಲೆ ನಡೆಯುವುದೇ ಮುಂತಾದ 'ಕೆಂಡಸೇವೆ'ಗಳು ರೂಢಿಯಲ್ಲಿವೆ. ಈ ದಕ್ಷಿಣಾನಿಲನು ತಾವರೆಗಳ ಕೊಳಗಳನ್ನು ಹಾದು ಬರುವುದನ್ನು ಕವಿ ಈ ರೀತಿ ವರ್ಣಿಸಿದ್ದಾನೆ.
: ೧೮. ಕತ್ತಿಯಿಂದ ಕಡಿದುಕೊಳ್ಳುವುದು, ಬೆಂಕಿಯಲ್ಲಿ ನಲಿದಾಡುವುದು ಮುಂತಾದುವು ಕರಾವಳಿಯ ದೈವಾರಾಧನೆಗಳಲ್ಲಿವೆ.
೧೯. ಗಮನ ಪ್ರಾಯಶ್ಚಿತ್ತ-ನಡೆದುಕೊಂಡು ಹೋಗುವಾಗ ಕಣ್ಣಿಗೆ ಕಾಣದ ಪ್ರಾಣಿಗಳು ತಮ್ಮ ಕಾಲಡಿಗೆ ಬಿದ್ದು ಸತ್ತಿರಬಹುದೆಂದೂ ಈ ಹಿಂಸೆಯ ಪಾಪ ತಮ್ಮಿಂದ ತಿಳಿಯದೆ ನಡೆದಿರಬಹುದಾದರೂ ಇದಕ್ಕೆ ಪ್ರಾಯಶ್ಚಿತ್ತವಾಗಿ ಉಪವಾಸವನ್ನು ಕೈಕೊಳ್ಳಬೇಕೆಂದೂ ಇದೆ. ಇದಕ್ಕೆ ಗಮನ ಪ್ರಾಯಶ್ಚಿತ್ತ ಎಂದು ಹೆಸರು.
೨೦. ಸುದತ್ತಾಚಾದ್ಯರ ನಾಮೋಚ್ಛಾರ ಮಾಡಿದರೆ ಆ ವ್ಯಕ್ತಿಗೆ ಮುಂದೆ ಜನ್ಮವನ್ನು ಪಡೆದು ತಾಯಿಯ ಮೊಲೆಹಾಲನ್ನು ಕುಡಿಯುವ ಪ್ರಸಂಗವೇ ಇಲ್ಲದೆ ಮೋಕ್ಷ ಪ್ರಾಪ್ತಿಯಾಗುವುದು ಎಂದು ಒಂದರ್ಥವಾದರೆ, ಎಳೆಯ ಮಗು ಸಹ ಸುದತ್ತಾಚಾರ್ಯರ ಹೆಸರು ಹೇಳಿದರೆ ಆ ನಾಮೋಚ್ಛಾರದ ಸವಿಯಿಂದಾಗಿ ತಾಯಿಯ ಮೊಲೆಹಾಲನ್ನೂ ಬಯಸಲಾರದು ಎಂಬುದು ಇನ್ನೊಂದರ್ಥ.