________________
೮೨
ಯಶೋಧರ ಚರಿತೆ ಭಕ್ತಿಗೌರವಗಳನ್ನು ಇಲ್ಲಿ ಕವಿ ಸೂಚ್ಯವಾಗಿ ತಿಳಿಸುತ್ತಾನೆ, ಕಥಾರಂಭಕ್ಕಿಂತಲೂ ಬಲ್ಲಾಳದೇವನ ವಂಶವರ್ಣನವೇ ಮೊದಲ ಕರ್ತವ್ಯ ಎಂಬ ಮಾತಿನಲ್ಲಿ.
೪. ಬಲ್ಲಾಳದೇವನ ವಂಶಾನುಕ್ರಮವನ್ನು ಹೇಳುವ ಮೊದಲು ಉತ್ತಮ ಕಾವ್ಯವು ಯಾರಿಗೆ ಮೆಚ್ಚಿಗೆಯಾಗುತ್ತದೆ, ಯಾರಿಗೆ ಮೆಚ್ಚಿಗೆಯಾಗುವುದಿಲ್ಲ ಎಂಬುದನ್ನು ಕವಿ ತಿಳಿಸುತ್ತಾನೆ. ಕಾವ್ಯದ ಸವಿಯನ್ನುಣ್ಣಬೇಕಾದರೆ ಅವನಲ್ಲಿ ಕಲ್ಪನಾಶಕ್ತಿ, ರಸಿಕತೆ, ಸಂಭಾವಿತತೆ, ಹಾಗೂ ಶಾಸ್ತಜ್ಞಾನ ಮುಂತಾದುವೆಲ್ಲ ಕೂಡಿರಬೇಕೆಂದು ಹೇಳುತ್ತಾನೆ. ಅಂಥವನು ದೇವನೆನ್ನಿಸುತ್ತಾನೆ ಎಂಬುದು ಒಂದರ್ಥವಾದರೆ, ಬಲ್ಲಾಳದೇವನೇ ಆ ಯೋಗ್ಯತೆಯುಳ್ಳವನು ಎಂಬುದು ಇನ್ನೊಂದರ್ಥ.
'ದೇವಾನಾಂ ಪ್ರಿಯ' ಎಂಬುದೊಂದು ವಿಶಿಷ್ಟ ಪ್ರಯೋಗ. ಅಶೋಕ ಚಕ್ರವರ್ತಿ ತನ್ನನ್ನು ದೇವಾನಾಂ ಪ್ರಿಯ ಎಂದು ದೇವತೆಗಳಿಗೆ ಪ್ರೀತಿಪಾತ್ರನಾದವನು ಎಂಬ ಒಳ್ಳೆಯ ಅರ್ಥದಲ್ಲಿ ಪ್ರಯೋಗಿಸಿದ್ದನಾದರೂ, ಅದಕ್ಕೆ ಅನಂತರ ಕ್ರಮೇಣ ಅರ್ಥ ವ್ಯತ್ಯಾಸವುಂಟಾಗಿ ಮೂಢ ಎಂಬರ್ಥ ಬಂದಿದೆ. 'ದೇವರಿಗೇ ಪ್ರೀತಿ' ಎಂದು ಬಳಕೆಯಲ್ಲಿರುವ ಮಾತಿಗೆ ಮನುಷ್ಯನೊಬ್ಬನಿಗೂ ಪ್ರೀತಿಪಾತ್ರನಲ್ಲದವನು ಎಂಬರ್ಥವೇ ಹೊಳೆಯುತ್ತದೆ.
೫. ಡಾ. ಎಚ್. ತಿಪ್ಪೇರುದ್ರಸ್ವಾಮಿ ಇವರ 'ಕರ್ಣಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ' ಎಂಬುದರಲ್ಲಿ ಹೀಗಿದೆ:
ಗಂಗವಾಡಿಯ ಉತ್ತರಭಾಗದ ಒಂದು ಮೂಲೆಯಲ್ಲಿ ಒಬ್ಬ ನಾಯಕ ತಲೆಯೆತ್ತಿದ. ಅವನನ್ನೇ 'ಸಳ' ಎಂದು ಕರೆಯಲಾಗಿದೆ. 'ಸಸವೂರು' ಅಥವಾ 'ಶಶಕಪುರ' ಎಂಬುದು ಅವನ ಕಾದ್ಯಕ್ಷೇತ್ರದ ಕೇಂದ್ರವಾಗಿದ್ದಂತೆ ತೋರುತ್ತದೆ. ಇದು ಈಗಿನ ಕಡೂರಿನ ಸುತ್ತುಮುತ್ತಲಿನ ಭಾಗವಾಗಿದ್ದಿರಬಹುದು.
- ಶಶಕಪುರದ ಹತ್ತಿರ ವಾಸಂತಿಕಾ ದೇವಾಲಯವಿತ್ತು. ಅಲ್ಲಿಗೆ ಒಮ್ಮೆಸಳ ಹೋದಾಗ ಅಲ್ಲಿ ಒಬ್ಬ ಜೈನಗುರು ಧ್ಯಾನಾಸಕ್ತರಾಗಿದ್ದರು. ಅವರ ದರ್ಶನವನ್ನು ಪಡೆಯುತ್ತಿರಲು ಅಷ್ಟರಲ್ಲಿ ಹುಲಿಯೊಂದು ಅಲ್ಲಿಗೆ ಬಂದು ಮೇಲೆ ಬೀಳಲು ಉದ್ಯುಕ್ತವಾಯಿತು. ಅದನ್ನು ಕಂಡ ಯತಿ 'ಹೊಯ್ ಸಳ' ಅಂದರೆ 'ಎಲೈ ಸಳನೇ ಹೊಡೆ' ಎಂದನು. ಆ ಕೂಡಲೇ ಸಳನು ಕೈಲಿದ್ದ ಆಯುಧದಿಂದ ಹುಲಿಯನ್ನು ಹೊಡೆದು ಕೊಂದುಹಾಕಿದನು. ಅವನ ಧೈರ್ಯಕ್ಕೆ ಮೆಚ್ಚಿ ಜೈನಯತಿ ವಾಸಂತಿಕಾದೇವಿಯ ಅನುಗ್ರಹವು ಆತನಿಗೆ ಲಭಿಸುವಂತೆ ಮಾಡಿದನು; ಮತ್ತು ಸುತ್ತುಮುತ್ತಲ ಪ್ರದೇಶಕ್ಕೆಲ್ಲ ರಾಜನಾಗುವಂತೆ ಆಶೀರ್ವದಿಸಿದನು. ಸಳನಿಗೆ ಅಲ್ಲಿಂದ ಮುಂದೆ ಪೊಯ್ಸಳ ಅಥವಾ ಹೊಯ್ಸಳನೆಂದೂ ಆತನ ವಂಶಕ್ಕೆ ಹೊಯ್ಸಳ ವಂಶವೆಂದೂ ಹೆಸರಾಯಿತು. (ಪು. ೧೨೬-೧೨೭)
ಇಲ್ಲಿ ಜನ್ನ ಸಳನು ಯತಿಯ ಕುಂಚದ ಸೆಳೆಯಿಂದ ಹೊಯ್ದನು ಎಂದಿದ್ದಾನೆ.