SearchBrowseAboutContactDonate
Page Preview
Page 85
Loading...
Download File
Download File
Page Text
________________ ಟಿಪ್ಪಣಿಗಳು ೧. ಮಹಾಕವಿಗಳ ಮಾತಿನ ಸುಂದರ ರೀತಿಗೆ ಇದೊಂದು ಉದಾಹರಣೆ. ಆದಿ ತೀರ್ಥಂಕರನಿಂದ ತೊಡಗಿ ಮಲ್ಲಿತೀರ್ಥಂಕರನವರೆಗಿನ ಹತ್ತೊಂಬತ್ತು ಮಂದಿಯೂ ಒಲಿಸಿಕೊಂಡುದು ಒಬ್ಬಳನ್ನೇ-ಮುಕ್ತಿ ಎಂಬ ವಧುವನ್ನೇ. ಒಬ್ಬರಾದ ಮೇಲೆ ಒಬ್ಬರಂತೆ ಅವಳನ್ನು ಒಲಿಸಿದವರು ಬೇರೆ ಬೇರೆಯಾಗಿದ್ದು ಅವಳು ಯಾವಾಗ ಇತರರಿಗೆ ಪರವನಿತೆಯೆನ್ನಿಸಿಕೊಂಡೇ ಇದ್ದಳು. ಹಾಗಿದ್ದರೂ ಸುವ್ರತನೆಂಬ ಇಪ್ಪತ್ತನೆಯ ತೀರ್ಥಂಕರನೂ ಅವಳನ್ನೇ ಒಲಿಸಿಕೊಂಡನು. ಅವನಿಗೆ ಇದರಿಂದ ಕೆಟ್ಟ ಹೆಸರು ಬಾರದೆ ಪರವನಿತೆಯಲ್ಲಿ ಒಂದಿಷ್ಟೂ ಅಪೇಕ್ಷೆಯಿರಿಸಿಕೊಳ್ಳದವನು ಎಂಬ ಪ್ರಶಂಸೆಯೇ ದೊರೆಯಿತಂತೆ! ಅವನು ದೇವರ ದೇವನೂ ಆಗಿದ್ದನಂತೆ. ಆ ರೀತಿ ಮಹಿಮಾವಂತನಾದ, ಸಾರ್ಥಕನಾಮನಾದ ಸುವ್ರತನನ್ನು, ಒಳ್ಳೆಯ ವ್ರತವನ್ನೇ ನಮಗೆ ದಯಪಾಲಿಸಲಿ ಎಂದು ಕವಿ ಚಮತ್ಕಾರವಾಗಿ ಪ್ರಾರ್ಥಿಸುತ್ತಾನೆ. ಹಲವರೊಲಿಸಿದ ಹೆಣ್ಣನ್ನು ಸುವ್ರತನೂ ಒಲಿಸಿಕೊಂಡರೂ ಪರರ ಹೆಣ್ಣನ್ನು ಬಯಸದವನೆಂಬ ಪ್ರಸಿದ್ಧಿಗೆ ಪಾತ್ರನಾದನೆಂದು ಹೇಳುವಲ್ಲಿ ವಿರೋಧವು ತೋರಿಬರುತ್ತದೆ. ಆದರೆ ಆ ಹೆಣ್ಣು ಮತ್ತಾರೂ ಅಲ್ಲ, ಮುಕ್ತಿ ಎನ್ನುವಾಗ ಈ ವಿರೋಧವು ಪರಿಹಾರಗೊಳ್ಳುತ್ತದೆ. ಈ ಉಕ್ತಿ ಚಮತ್ಕಾರದಲ್ಲಿ, ಎಲ್ಲ ತೀರ್ಥಂಕರರೂ ಮೋಕ್ಷವನ್ನು ಪಡೆದವರೆಂದೂ, ಅವರು ದೇವತೆಗಳಿಗೆಲ್ಲ ದೇವರಾಗಿದ್ದರೆಂದೂ, ಇದಕ್ಕೆಲ್ಲ ಅವರ ಪರವನಿತಾನಿರಪೇಕ್ಷಕಗುಣವೇ ಕಾರಣವೆಂದೂ ಸೂಚಿತವಾಗಿದೆ. ಪರಸ್ತ್ರೀಕಾಮುಕತೆಯನ್ನು ಪರಿಹರಿಸಿಕೊಂಡವರು ಪರಮಪದವನ್ನು ಪಡೆಯಬಹುದೆಂದು ಇದರಿಂದ ಧ್ವನಿತವಾಗುತ್ತದೆ. ಈ ಕತೆಯಲ್ಲಿ ಒಲೆಯ ವಿಷಯವಿರುವುದರಿಂದ ಕವಿ 'ಒಲಿಸು' ಎಂಬ ಶಬ್ದವನ್ನು ಆರಂಭದಲ್ಲಿಯೇ ಪ್ರಯೋಗಿಸಿದ್ದಾನೆನ್ನಬಹುದು. 'ಯಶೋಧರ ಚರಿತೆ' ಎಂಬುದು 'ಜೀವದಯಾಷ್ಟಮಿ' ಎಂಬ ವ್ರತದ ಸಂದರ್ಭಕ್ಕೊಪ್ಪುವ ಕತೆಯಾದುದರಿಂದ ಜನ್ನಕವಿ ಆರಂಭದಲ್ಲಿ ಸುವ್ರತಜಿನನನ್ನು ಪ್ರಾರ್ಥಿಸಿ, ಅವನು ಎಲ್ಲರಿಗೆ ಆ ವ್ರತವನ್ನು ಅನುಗ್ರಹಿಸುವಂತೆ ಕೇಳಿಕೊಳ್ಳುತ್ತಾನೆ. ಹೀಗೆ ಇದೊಂದು ಸುಂದರ 'ಕಂದ'. ೨. ಅರ್ಹಂತ, ಸಿದ್ದ, ಆಚಾರ್ಯ, ಉಪಾಧ್ಯಾಯ, ಸಾಧು ಎಂಬ ಪಂಚಪರಮೇಷ್ಠಿಗಳನ್ನು ಕಾರಾ (ವ್ಯಾರಂಭದಲ್ಲಿ ನಮಸ್ಕರಿಸುವುದು ಜೈನಪದ್ಧತಿ. ೩. ಇಲ್ಲಿ ಜನ್ನನು ತನಗಿರುವ ಕವಿವೃಂದಾರಕವಾಸವ, ಕವಿಕಲ್ಪಲತಾಮಂದಾರ ಎಂಬ ಬಿರುದುಗಳನ್ನು ಸೂಚಿಸುತ್ತಾನೆ. ತನ್ನ ಪೋಷಕನಾದ ಬಲ್ಲಾಳದೇವನ ಮೇಲಿರುವ
SR No.034021
Book TitleYasodhara Carita
Original Sutra AuthorN/A
AuthorJanna
PublisherKannada Sahitya Parishattu
Publication Year2015
Total Pages536
LanguageKannada
ClassificationBook_Other & Kavya
File Size16 MB
Copyright © Jain Education International. All rights reserved. | Privacy Policy