________________
ಉಪೋದ್ಘಾತ | ೩ ಜೈನಮತವನ್ನವಲಂಬಿಸಿದ್ದಾರೆ. ಗಂಗರ ದಂಡನಾಯಕನಾದ ರಾಚಮಲ್ಲನೇ ಶ್ರವಣಬೆಳುಗೊಳದ ಗೊಮ್ಮಟವಿಗ್ರಹವನ್ನು ಸ್ಥಾಪಿಸಿದವನು. ನೃಪತುಂಗ ಅಮೋಘವರ್ಷ ಮತ್ತು ಕೃಷ್ಣರು ವೀರಜೈನರೇ ಆಗಿದ್ದರು. ನಾಲ್ಕನೆಯ ಇಂದ್ರನು ಶ್ರವಣಬೆಳುಗೊಳದಲ್ಲಿ ಸಲ್ಲೇಖನವ್ರತದಿಂದ ನಿರ್ವಾಣಹೊಂದಿದಂತೆ ತಿಳಿದುಬರುತ್ತದೆ. ಹತ್ತನೆಯ ಶತಮಾನದಲ್ಲಿ ಚಾಳುಕ್ಯದೊರೆಯಾದ ತೈಲಪನು ಇಮ್ಮಡಿಕಕ್ಕನನ್ನು ಸೋಲಿಸಿ ದಕ್ಷಿಣದಲ್ಲಿ ರಾಜ್ಯಾಧಿಪತ್ಯ ವನ್ನು ವಹಿಸಿಕೊಂಡು ಪುನಃ ಚಾಳುಕ್ಯರಾಜ್ಯವನ್ನು ಸ್ಥಾಪಿಸಿದನು. ಚಾಳುಕ್ಯರು ಶೈವರೇ ಆದರೂ ಜೈನಮತದಲ್ಲಿ ಪೂರ್ಣವಾದ ಸಹಾನುಭೂತಿಯನ್ನು ತೋರಿದರು.
- ಆದಿಕಾಲದ ಕನ್ನಡಕವಿಗಳು ತಮ್ಮ ಕಾವ್ಯರಚನೆಗೆ ಆ ಕಾಲದ ಸಂಸತಕಾವ್ಯಗಳನ್ನು ಮಾದರಿಯನ್ನಾಗಿ ಅಂಗೀಕಾರ ಮಾಡಿದರು. ಆಗಿನ ಕಾಲಕ್ಕೆ ಸಂಸ್ಕೃತಸಾಹಿತ್ಯದ ಉನ್ನತ ಕಾಲ ಆಗಿ ಹೋಗಿತ್ತು. ಕಾವ್ಯಲಕ್ಷಣಗಳನ್ನು ಕುರಿತು ಅನೇಕ ಗ್ರಂಥಗಳು ತಲೆದೋರಿದ್ದವು. ಅವುಗಳ ಕಾವ್ಯಗಳ ದೋಷಗಳನ್ನು ಖಚಿತವಾಗಿ ನಿಷ್ಕರ್ಷೆ ಮಾಡಿದ್ದವು. ಭಾವದ ತೀವ್ರತೆಯೂ ಸರಳತೆಯೂ ಮಾಯವಾಗಿ ರೀತಿ, ಗುಣಾಲಂಕಾರಗಳಿಗೂ ಕವಿಸಮಯಗಳಿಗೂ ಪ್ರಾಶಸ್ತವುಂಟಾಗಿದ್ದಿತು. ಆನಂದವರ್ಧನನ ಧ್ವನಿತತ್ವವು ಪ್ರತಿಪಾದಿತವಾಗಿದ್ದರೂ ರೂಢಿಗೆ ಬಂದಿರಲಿಲ್ಲವೆಂದು ಕಾಣುತ್ತದೆ. ನೃಪತುಂಗನ ಕಾಲಕ್ಕೆ ಕನ್ನಡಭಾಷೆಯಲ್ಲಿ ಒಂದು ಹೊಸ ಪರಿವರ್ತನೆಯು ತಲೆದೋರಿದ್ದಿತು. ಕಾವ್ಯಗಳೂ ಹೊಸರೀತಿಯಲ್ಲಿ ರಚಿತವಾಗುತ್ತಿದ್ದವು. ಕನ್ನಡದಲ್ಲಿ ಕಾವ್ಯಗಳನ್ನು ಬರೆಯುವ ಕವಿಗಳು ಸಂಸ್ಕೃತಭಾಷೆಯಲ್ಲಿ ತಮಗಿದ್ದ ಹೆಚ್ಚಾದ ಪಾಂಡಿತ್ಯದಿಂದ ಕನ್ನಡಭಾಷೆಯಲ್ಲಿ ಸಂಸ್ಕೃತವನ್ನು ವಿಶೇಷವಾಗಿ ತುಂಬ ತೊಡಗಿದರು. ಆ ಭರದಲ್ಲಿ ಕನ್ನಡನುಡಿಯ ಗಡಿಯ ಮರ್ಯಾದೆಯೂ ಮೀರಿ ಕನ್ನಡಕಾವ್ಯಗಳೆಲ್ಲ ಸಂಸ್ಕೃತ ಮಯವಾಗುವುದಕ್ಕೆ ಪ್ರಾರಂಭವಾದುವು. ಈ ಪರಿಸ್ಥಿತಿಯನ್ನು ನೋಡಿ ನೃಪತುಂಗನು ವ್ಯಸನಪಟ್ಟ, ಕನ್ನಡದಲ್ಲಿ ಸಂಸ್ಕೃತವನ್ನು ಎಷ್ಟರಮಟ್ಟಿಗೆ ಮೇಳನ ಮಾಡಬಹುದು; ಬೆರಸುವಾಗ ಯಾವ ನಿಯಮವನ್ನನುಸರಿಸಬೇಕು ಮೊದಲಾದ ವಿಷಯಗಳನ್ನೊಳಗೊಂಡ 'ಕವಿರಾಜಮಾರ್ಗ' ವೆಂಬ ಲಕ್ಷಣಗ್ರಂಥವೊಂದನ್ನು ರಚಿಸಿದನು. ಕನ್ನಡ ಲಕ್ಷಣಗ್ರಂಥಗಳಲ್ಲಿ ಇದೇ ಮೊತ್ತಮೊದಲನೆಯದು. ಈ ಲಕ್ಷಣಗ್ರಂಥವನ್ನನುಸರಿಸಿ ಹೊಸಮಾದರಿಯ ಗ್ರಂಥಗಳು ಹೊರಬೀಳತೊಡಗಿರಬೇಕು. ಕರ್ನಾಟಕದಲ್ಲಿ ಎಲ್ಲೆಲ್ಲಿಯೂ ಸಾಹಿತ್ಯಾಭಿಮಾನವು ತಲೆದೋರಿ ಹತ್ತನೆಯ ಶತಮಾನದ ವೇಳೆಗೆ ಕನ್ನಡದಲ್ಲಿ ಬೆಳ್ಳಿಯ ಬೆಳಸು ತಲೆದೋರಿತು. ವೀರಾಗ್ರೇಸರರೂ ತ್ಯಾಗವೀರರೂ ಆದ ರಾಜರುಗಳೂ ಅವರ ಮಂತ್ರಿ ಸೇನಾಪತಿಗಳೂ ಕವಿಗಳಿಗೆ ಪೋಷಕವಾದುದಲ್ಲದೆ ಸ್ವಯಂ ಕವಿಗಳಾದರು. ರಾಜರುಗಳೇ ಅಲ್ಲದೆ ಧರ್ಮಾಭಿಮಾನಿಗಳನೇಕರು ಕವಿಗಳಿಗೆ ಆಶ್ರಯದಾತರಾದರು, ಕವಿಗಳು ಕಲಿಗಳೂ ಆಗಿ ತಮಗೆ ದೊರೆತ ಆಶ್ರಯವನ್ನು ಸದುಪಯೋಗಿಸಿಕೊಂಡು ಆಶ್ರಯದಾತರ ಕೀರ್ತಿಯನ್ನು ಚಿರಸ್ಥಾಯಿಯನ್ನಾಗಿ ಮಾಡುವುದಕ್ಕೂ ತಮ್ಮಧರ್ಮಋಣವನ್ನು ಪೂರ್ಣಮಾಡುವುದಕ್ಕೂ ಲೌಕಿಕ ಮತ್ತು ಧಾರ್ಮಿಕ ಗ್ರಂಥಗಳನ್ನು ರಚಿಸಿದರು. ಆಗಿನ ಕಾಲದ ಗಂಗ, ರಾಷ್ಟ್ರಕೂಟ,