________________
ಉಪೋದ್ಘಾತ | ೬೧ ಬಹುಮಟ್ಟಿಗೆ ಕಾರಣ. ಅವನ 'ಗದಾಯುದ್ಧ'ವು ಪಂಪಭಾರತದ ಹದಿಮೂರನೆಯ ಆಶ್ವಾಸದ ೧೦೮ ಪದ್ಯಗಳಲ್ಲಿ ಶಲ್ಯವಧೆಯ ವಿಚಾರವಾದ ೨೮ ಪದ್ಯಗಳನ್ನುಳಿದ ಭಾಗಗಳ ವಿಸ್ತರಣವೇ ಆಗಿದೆ. ವಸ್ತುವರ್ಣನೆ, ಶೈಲಿ ಮೊದಲಾದವುಗಳಲ್ಲಿ ಬಹುಭಾಗ ಪಂಪನದಾಗಿರುತ್ತದೆ. ರನ್ನನ ದುರ್ಯೊಧನನ ಪಾತ್ರಚಿತ್ರಣ ಪಂಪನ ಪ್ರೇರಣೆಯಿಂದಲೇ ಆಗಿರಬೇಕು.
ಕೊನೆಯಲ್ಲಿ ಈ ಪ್ರಬಂಧವನ್ನು ಮುಗಿಸುವ ಮೊದಲು ಪಂಪನ ದೇಶಾಭಿಮಾನದ ವಿಷಯವಾಗಿ ಒಂದು ಮಾತನ್ನು ಹೇಳುವುದು ಆವಶ್ಯಕ. ಆಂಗ್ಲಭಾಷೆಯ ಗದ್ಯಗ್ರಂಥಕಾರರಲ್ಲಿ ಉದ್ದಾಮನಾದ ಮಯರ್ಸ್ ಎಂಬುವನು ವರ್ಡ್ಸ್‌ವರ್ತ್ ಕವಿಯ ಜೀವನ ಚರಿತ್ರೆಯನ್ನು ಬರೆಯುತ್ತ ಅವನ ದೇಶಾಭಿಮಾನವನ್ನು ಕುರಿತು ಚರ್ಚಿಸುವಾಗ ಹೀಗೆಂದು ಹೇಳುವನು-ಸ್ವದೇಶದ ಹಿತಕ್ಕಾಗಿಯೂ ಏಳಿಗೆಗಾಗಿಯೂ ಶರೀರವನ್ನರ್ಪಿಸಿ ಹೋರಾಡುವ ವೀರರು ಹೇಗೆ ದೇಶಾಭಿಮಾನಿಗಳೊ ಹಾಗೆಯೇ ಕವಿಯು ಅಂತಹ ದೇಶಾಭಿಮಾನಿಯೆಂದು ಕರೆಯಿಸಿಕೊಳ್ಳಲರ್ಹನು. ಇವನು ಕವಚವನ್ನು ಧರಿಸಿ ಬಿಲ್ಲು ಬಾಣಗಳನ್ನು ಹಿಡಿದು ರಥವನ್ನೇರಿ ಯುದ್ಧರಂಗದಲ್ಲಿ ವೈರಿಗಳೊಡನೆ ಯುದ್ಧ ಮಾಡಬೇಕಾಗಿಲ್ಲ. ಕವಿಯಾದವನು ದೇಶಕ್ಕಾಗಿ ಹೋರಾಡುವ ದೇಶಭಕ್ತರ ಸಾಹಸಕಾರ್ಯಗಳನ್ನು ತನ್ನಲ್ಲಿರುವ ಕವಿತಾಶಕ್ತಿಯಿಂದ ಗ್ರಂಥರೂಪದಲ್ಲಿ ಚಿರಸ್ಥಾಯಿಯಾಗಿ ಮಾಡುವುದರಲ್ಲಿ ನಿರತನಾಗುವುದು ತನ್ನ ದೇಶಾಭಿಮಾನದ ಹೆಗ್ಗುರುತು. ಯಾವ ಕವಿಯಲ್ಲಿ ಈ ತೆರನಾದ ದೇಶಾಭಿಮಾನವಿರುವುದಿಲ್ಲವೋ ಅಂತಹವನು ಇಂತಹ ಕಾವ್ಯವನ್ನು ರಚಿಸಲಾರ. ರಚಿಸಿದರೂ ನಿರ್ಜಿವವೂ ಕಲಾರಹಿತವೂ ಆಗುತ್ತದೆ ಎಂದು ಹೇಳಿ ವರ್ಡ್ಸ್‌ವರ್ತ್ ಕವಿಯನ್ನು ದೇಶಾಭಿಮಾನಿಗಳ ಗುಂಪಿನಲ್ಲಿ ಸೇರಿಸಿರುವನು. ಇದು ವಾಸ್ತವವಾದ ಅಂಶ. ಇಂತಹವರು ಯಾವಾಗಲೂ ದೇಶಕ್ಕಾಗಿ ಮಡಿಯಲು ಸಿದ್ದರಾಗಿರುತ್ತಾರೆ. ಇಂತಹ ದೇಶಾಭಿಮಾನವು ಪಂಪನಲ್ಲಿ ತುಂಬಿ ತುಳುಕುತ್ತಿರುವುದು ಅವನ ಕಾವ್ಯಗಳಲ್ಲಿ ಸ್ವಯಂಪ್ರಕಾಶವಾಗಿದೆ.
ಪಂಪನ ದೇಶವಾತ್ಸಲ್ಯಗಳನ್ನು ವ್ಯಕ್ತಗೊಳಿಸುವ ಪದ್ಯಗಳು ಅವನ ಕಾವ್ಯಗಳಲ್ಲಿ ನಮಗೆ ಹೇರಳವಾಗಿ ಸಿಕ್ಕುವುವು. ಅರ್ಜುನನು ದಿಗ್ವಿಜಯಾರ್ಥವಾಗಿ ಬರುತ್ತಾ ಬನವಾಸಿಯನ್ನು ಸೇರುವನು. ಈ ದೇಶವನ್ನು ನೋಡಿ ಅವನ ಹೃದಯವು ಆನಂದಭರಿತವಾಗುವುದು. ಅಲ್ಲಿ ನೆಲೆಗೊಂಡಿದ್ದ ಬಗೆಬಗೆಯ ಸಂಪತ್ತು, ಪುಷ್ಪವಾಟಿ, ಕಾಸಾರ, ಲತಾಗೃಹ, ನಂದನವನ-ಇವು ಯಾವ ದಾರಿಗನಿಗಾದರೂ ಆನಂದ ವನ್ನುಂಟುಮಾಡುವುದು, ಅಲ್ಲಿಯ ನಿವಾಸಿಗಳು ಸ್ವರ್ಗಸುಖವನ್ನನುಭವಿಸುತ್ತಿರುವರು. ಇಂತಹ ನಾಡಿನಲ್ಲಿ ಒಂದು ಸಲ ಜನ್ಮವೆತ್ತುವುದೂ ಪುಣ್ಯಫಲದಿಂದಲೇ, ಇದಕ್ಕಾಗಿ ಮನುಷ್ಯನು ಎಷ್ಟು ತಪಸ್ಸು ಮಾಡಿದರೂ ಸಾರ್ಥಕವೇ. 'ತುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ಬನವಾಸಿ ದೇಶದೊಳ್'! ಇದೇ ಅಲ್ಲವೇ ಹುಟ್ಟಿದುದಕ್ಕೆ ಸಾರ್ಥಕ! ಪಂಪನು ಬಾಲ್ಯದಲ್ಲಿ ಬನವಾಸಿಯಲ್ಲಿ ಬಹುಕಾಲ ಇದ್ದು ಅದರ