________________
೩೦ | ಪಂಪಭಾರತಂ
: ಪಂಪನ ಶೈಲಿ-ಒಬ್ಬ ಕವಿಯ ವ್ಯಕ್ತಿತ್ವವೂ ಮಹತ್ವವೂ ಅವನ ಶೈಲಿಯಲ್ಲಿ . ಪ್ರತಿಬಿಸುತ್ತದೆ ಎಂದು ತಿಳಿದವರು ಹೇಳುತ್ತಾರೆ. ಇದು ಬಹುಮಟ್ಟಿಗೆ ನಿಜ. ಅವನ ಆವೇಶ, ಅವನ ಮನೋಭಾವ, ಅವನ ಲೋಕಾನುಭವ, ಅವನ ಪ್ರತಿಭಾಸಂಪನ್ನತೆ, ಜ್ಞಾನ, ವಾಗೋರಣೆ ವ್ಯಕ್ತಿತ್ವ-ಪ್ರತಿಯೊಂದೂ ಅವನ ಶೈಲಿಯಲ್ಲಿ ಸ್ಪುಟವಾಗಿ ಎದ್ದು ಕಾಣುತ್ತವೆ. ಕವಿಯು ಹುಲುಗ ವಿಯಾದರೆ ಹಿಂದಿನ ಕಾವ್ಯಗಳನ್ನೇ ಮಾದರಿಯಾಗಿಟ್ಟುಕೊಂಡು ಅವುಗಳ ಸಾರವನ್ನು ಗ್ರಹಿಸದೆ ನಿರ್ಜಿವವಾದ ಕಟ್ಟಡವನ್ನು ತೆಗೆದುಕೊಂಡು ಶಬ್ದಗಳ ಜೋಡಣೆಯಿಂದ ಶುಷ್ಕವಾಗಿ ಪಡಿಯಚ್ಚನ್ನು ನಿರ್ಮಿಸುತ್ತಾನೆ. ಅದರಲ್ಲಿ ಸತ್ವವಿರುವುದಿಲ್ಲ, ಜೀವವಿರುವುದಿಲ್ಲ, ಮನುಷ್ಯನ ಭಾವನಾಡಿಗಳನ್ನು ಮೀಟುವ ಆವೇಶವಿರುವುದಿಲ್ಲ, ಕವಿಯು ಅರ್ಥವಿಲ್ಲದ ಕವಿಸಮಯಗಳನ್ನು ಒಂದರಮೇಲೊಂದನ್ನು - ಮೂಟೆ ಮೂಟೆಯಾಗಿ ತುಂಬಿ ಜುಗುಪ್ಪೆಯನ್ನುಂಟುಮಾಡುತ್ತಾನೆ. ಹಾಗಲ್ಲದೆ ಕವಿಯು ಪ್ರಜ್ಞಾಶಾಲಿಯೂ ಕಲ್ಪನಾಚತುರನೂ ಪ್ರತಿಭಾಸಂಪನ್ನನೂ ಅನುಭವಶಾಲಿಯೂ ಆದರೆ ಕಾವ್ಯದಲ್ಲಿ ಒಂದು ವಿಧವಾದ ಆವೇಶವನ್ನು ತುಂಬಿ ವಾಚಕನ ಮೇಲೆ ತನ್ನದೇ ಆದ ಸಮ್ಮೋಹನಾಸ್ತವನ್ನು ಬೀರಿ ತನ್ನವನನ್ನಾಗಿ ಮಾಡಿಕೊಳ್ಳುತ್ತಾನೆ. ಸಾಧಾರಣವಾಗಿ ಕನ್ನಡ ಕವಿಗಳನೇಕರಿಗೆ ಈ ಕಾವ್ಯಮರ್ಮ ತಿಳಿಯದೆಂಬ ಅಪಪ್ರಥೆಯಿದೆ. ಆದರೆ, ಕವಿತಾಗುಣಾರ್ಣವನಾದ ಪಂಪನ ವಿಷಯವೇ ಬೇರೆ. ಆತನು ಕವಿವೃಷಭ. ಕವಿಯಾಗಿದ್ದಂತೆಯೇ ಕಲಿಯೂ ಆಗಿದ್ದವನು ಕನ್ನಡ, ಸಂಸ್ಕೃತ, ಪ್ರಾಕೃತ, ಅಪಭ್ರಂಶಗಳ ಪೂರ್ಣಪಾಂಡಿತ್ಯವುಳ್ಳವನು. ಜೀವನದ ವಿವಿಧಕ್ಷೇತ್ರಗಳ ಪ್ರತ್ಯಕ್ಷಾನುಭವವನ್ನುಳ್ಳವನು. ವೈದಿಕ ಮತ್ತು ಜೈನ ಸಂಸ್ಕಾರಗಳ ಮೇಳವನ್ನುಳ್ಳವನು. ರಸಿಕತೆಯನ್ನೂ ರಾಜಾಶ್ರಯವನ್ನೂ ಆತ್ಮಾಭಿಮಾನವನ್ನೂ ಆನಂದಾನುಭವವನ್ನೂ ಉಳ್ಳವನು. ತನ್ನ ಹಿಂದಿನ ಗ್ರಂಥಗಳ ಮಾದರಿಯಲ್ಲಿ ಗ್ರಂಥರಚನೆಗೆ ಹೊರಟಿದ್ದರೂ ಅವುಗಳ ಸಾರವನ್ನು ಉಪಯೋಗಿಸಿಕೊಂಡಿದ್ದರೂ ಮಾರ್ಗ ಮತ್ತು ಶೈಲಿಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿದ್ದಾನೆ. ಮುಂದಿನ ಕವಿಗಳಿಗೆ ಮಾರ್ಗದರ್ಶಕನಾಗಿದ್ದಾನೆ. ಆದುದರಿಂದ ಅವನ ಶೈಲಿಯಲ್ಲಿ ಪ್ರತ್ಯೇಕ ವ್ಯಕ್ತಿತ್ವವಿದೆ. ಒಂದು ಮೋಹಕಶಕ್ತಿಯಿದೆ. ಅವನು ಯಾವುದನ್ನು ಚಿತ್ರಿಸಿದರೆ ಮನದಟ್ಟಾಗುವಂತೆ ಚಿತ್ರಿಸುತ್ತಾನೆ. ಅದನ್ನು ಓದುತ್ತ ಓದುತ್ತ ವಾಚಕನೂ ಮುಗ್ಧನಾಗಿ ಅಲ್ಲಿಯ ಪಾತ್ರಗಳು ಮತ್ತು ಸನ್ನಿವೇಶಗಳಲ್ಲಿ ಐಕ್ಯನಾಗುವನು. ಕಥಾಶರೀರದಲ್ಲಿ ತಾನೂ ಭೂಮಿಕೆಯಾಗಿ ಬಿಡುವನು. ಪಂಪನ ಯಾವ ವರ್ಣನೆಯನ್ನು ತೆಗೆದುಕೊಂಡರೂ ಹೀಗೆಯೇ. ಬನವಾಸಿಯ ವರ್ಣನೆಯನ್ನು ನೋಡಿ. ಅದರ ವೈಭವವನ್ನು ಓದಿದ ಕೂಡಲೆ ವಾಚಕನೂ ಬನವಾಸಿಯಲ್ಲಿ ಮರಿದುಂಬಿಯಾಗಿಯೋ ಕೋಗಿಲೆಯಾಗಿಯೋ ಹುಟ್ಟಬೇಕೆಂದು ಆಶಿಸುವನು. ಸುಭದ್ರಾಪರಿಣಯಕ್ಕೆ ಮುಂಚಿನ ಚಂದ್ರಿಕಾವಿಹಾರದಲ್ಲಿ ವೇಶ್ಯಾವಾಟಿಕೆಯ ವರ್ಣನೆಯನ್ನು ಓದುತ್ತಿದ್ದರೆ ತಾನೂ ಆ ಬೀದಿಯಲ್ಲಿ ಸಂಚರಿಸುತ್ತಿರುವಂತೆ ಭ್ರಾಂತಿಗೊಳ್ಳುವನು ದುಶ್ಯಾಸನನು ದೌಪದಿಯ ಕೇಶಗ್ರಹಣ ಮಾಡಿ ಸೆಳೆದುಕೊಂಡು ಬರುವುದನ್ನು ವಾಚಿಸಿದಾಗ ಪಾಪಿ ದುಶ್ಯಾಸನನನ್ನು ಸೀಳಿ ಬಿಡೋಣವೇ