________________
ಚತುರ್ಥಾಶ್ವಾಸಂ | ೨೪೫ ಪೋರ್ಕುಳಿ ಬೊಜಂಗರುಮಂ ಕತ್ತುರಿ ಬಿಯಮಂ ಮೆದು ಕತ್ತುರಿಯೊಳ್ ಪೂಟ್ಟು ಕತ್ತುರಿಮಿಗದಂತಿರ್ಪ ಕತ್ತುರಿ ಬೊಜಂಗರುಮಂ ನೋಡಿ ಪೋಲ ಬೊಜಂಗರ ಬಿಯದಳವಿಗೆ ಮನದೊಳ್ ಮಚ್ಚುತ್ತುಂ ಬರ್ಪನೊಂದೆಡೆಯೊಳ್ ಕಳೊಳಮಮರ್ದಿನೊಳಂ ಪುಟ್ಟದ ಪೆಂಡಿರಂತ ಸೊಗಯಿಸುವ ಪಲರುಮೊಳ್ಕೊಂಡಿರೊಂದೆಡೆಯೊಳಿರ್ದು ಕಾಮದೇವನೆಂಬ ಬಳಮರ್ದುಕಾಶನ ಮಾಡಿದ ಮರ್ದಿನಂತೆ ಬಳೆದು ದಳಂಬಡೆದು ಮೂನೂರುವತ್ತು ಜಾತಿಯ ಕಳಳಂ ಮುಂದಿಟ್ಟು ಮಧುಮಂತ್ರದಿಂ ಮಧುದೇವತೆಗಳನರ್ಚಿಸಿ ಪೊನ್ನ ಬೆಳ್ಳಿಯ ಪದರಾಗದ ಪಚ್ಚೆಯ ಗಿಳಿಯ ಕೋಗಿಲೆಯ ಕೊಂಚೆಯಂಚೆಯ ಕುಂತಳಿಕೆಯ ಮಾಲೆಯ ಸಿಪ್ಪುಗಳೊಳ್ ತೀವಿ ಮಧುಮಂತ್ರಂಗಳಿಂ ಮಂತ್ರಿಸಿ ನೆಲದೊಳಅದು ತಲೆಯೊಳ್ ತಳಿದು ಕಳ್ ಬೊಟ್ಟನಿಟ್ಟುಕೊಂಡು ಕೆಲದರ್ಗೆಲ್ಲಂ ಬೊಟ್ಟಿಟ್ಟು ಕಿಲೆಯ ಪಿರಿಯರಂದು ಪೊಡವಟ್ಟು ಧರ್ಮಗಳುಡಿವರ್ಗೆಲ್ಲಂ ಮೀಸಲ್ಗಳ್ಳನೆದು ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿಟಕಿದನೆಂದು ಕುಡಿಬಿದಿರ ಕುಡಿಯ ಮಾವಿನ ಮಿಡಿಯ ಮಾರುದಿನ ಮಣಸುಗಡಲೆಯ ಪುಡಿಯೊಳಡಸಿದಲ್ಲವಲ್ಲಣಿಗೆಯ ಚಕ್ಕಣಂಗಳಂ ಸವಿಸವಿದು
ಚಿಕ್ಕ ಜಗಳಗಂಟ ವಿಟರನ್ನೂ ತಾವು ವಿಶೇಷವಾಗಿ ಕಸ್ತೂರಿಯನ್ನು ಲೇಪನ ಮಾಡಿಕೊಂಡು ಅದರಲ್ಲಿಯೇ ಅದ್ದಿ ಮುಳುಗಿ ಆ ಕಸ್ತೂರಿಯ ವ್ಯಯವನ್ನೇ ಒತ್ತೆಯನ್ನಾಗಿ ತೋರಿಸುತ್ತ ಕಸ್ತೂರಿಯ ಮೃಗದಂತೆ ಕರಗಿರುವ ಕಸ್ತೂರಿ ವಿಟರನ್ನೂ ನೋಡಿ ಆ ಪಟ್ಟಣದ ವಿಟರ ವ್ಯಯದ (ಖರ್ಚುಮಾಡುವ ದ್ರವ್ಯದ) ಪ್ರಮಾಣಕ್ಕೆ ಮನಸ್ಸಿನಲ್ಲಿ ಮೆಚ್ಚುತ್ತ ಮುಂದೆ ಬರಲು ಪಾನಶಾಲೆಯು ಕಣ್ಣಿಗೆ ಬಿದ್ದಿತು. ಒಂದೆಡೆಯಲ್ಲಿ ಕಳ್ಳಿನಲ್ಲಿಯೂ ಅಮೃತದಲ್ಲಿಯೂ ಹುಟ್ಟಿದ ಸ್ತ್ರೀಯರಂತೆ - ಸುರಾದೇವಿ ಮತ್ತು ಲಕ್ಷ್ಮೀದೇವಿಯರಂತೆ ಸೊಗಯಿಸುವ ಅನೇಕ ಸುಂದರಿಯರು ಒಂದು ಕಡೆ ಸೇರಿ ಕಾಮದೇವನೆಂಬ ಮದ್ದುಗಾರನು (ತುಬಾಕಿಯ ಮದ್ದನ್ನು ಮಾಡುವವನು) ಮಾಡಿದ ಮದ್ದಿನಂತೆ ಅಭಿವೃದ್ಧಿಯಾಗಿ ಪುಷ್ಟಿಗೊಂಡಿರುವ ಮುನ್ನೂರರುವತ್ತು ಜಾತಿಯ ಕಳ್ಳುಗಳನ್ನು (ಹೆಂಡಗಳನ್ನು) ತಮ್ಮ ಮುಂದೆ ಇಟ್ಟುಕೊಂಡು ಮಧುಮಂತ್ರದಿಂದಲೇ ಮಧುದೇವತೆಗಳನ್ನು ಪೂಜಿಸಿದರು. ಚಿನ್ನ ಬೆಳ್ಳಿ ಮತ್ತು ಪದ್ಮರಾಗಗಳಿಂದ ಗಿಳಿ, ಕೋಗಿಲೆ, ಕ್ರೌಂಚ, ಹಂಸ ಮತ್ತು ಕುಂತಳಿಕೆಯೆಂಬ ಹಕ್ಕಿಗಳ ಮಾದರಿಗಳಲ್ಲಿ ಮಾಡಿರುವ ಚಿಪ್ಪುಗಳಲ್ಲಿ ತುಂಬಿ (ಮಧುಮಂತ್ರಗಳಿಂದಲೇ ಮಂತ್ರಿಸಿ ನೆಲದಲ್ಲಿ ಸ್ವಲ್ಪ ಸ್ವಲ್ಪ ಚೆಲ್ಲಿ ತಲೆಯಲ್ಲಿ ಪ್ರೋಕ್ಷಿಸಿಕೊಂಡು,) ಕಳ್ಳಿನಿಂದ ಮುಖಕ್ಕೆ ಬೊಟ್ಟನ್ನಿಟ್ಟು ಕಿರಿಯರಾದವರು ಹಿರಿಯರಾದವರನ್ನು ಗುರುತಿಸಿ ಅವರಿಗೆ ನಮಸ್ಕಾರಮಾಡಿ ಉಚಿತವಾಗಿ ದಾನಮಾಡಬೇಕಾದವರಿಗಾಗಿ ಮೀಸಲಾದುದನ್ನು ಅವರಿಗೆ ದಾನಮಾಡಿದರು. ಚಿನ್ನದ ಮತ್ತು ಬೆಳ್ಳಿಯ ಚಿಪ್ಪುಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ತುಂಬಿಕೊಂಡು ಎಳೆಯ ಬಿದಿರಿನ ಕಳಕೆ, ಮಾವಿನ ಮಿಡಿ, ಬಿಲ್ಪತ್ರೆಯ ಕಾಯಿನ ತಿರುಳು, ಕಾರದ ಕಡಲೆಯ ಪುಡಿಯಿಂದ ಕೂಡಿದ ಹಸಿಯ ಶುಂಠಿಯ ಮಿಶ್ರಣವನ್ನುಳ್ಳ ಚಕ್ಕಣ ಗಳೆಂಬ ನಂಜಿಕೊಳ್ಳುವ ಪದಾರ್ಥಗಳನ್ನು ಸವಿಸವಿದು ಕಳ್ಳು ಕುಡಿದರು.