________________
ಅನುಬಂಧ-೧ ಪಂಪನು ತನ್ನ ಭಾರತದ ಪ್ರಾರಂಭದಲ್ಲಿ ತನ್ನ ಪೋಷಕನಾದ ಅರಿಕೇಸರಿಯ ವಂಶವೃಕ್ಷವನ್ನು ವಿಸ್ತಾರವಾಗಿ ಕೊಟ್ಟಿದ್ದಾನೆ. ಇದು ಐತಿಹಾಸಿಕ ದೃಷ್ಟಿಯಿಂದ ಬಹು ಉಪಯುಕ್ತವಾಗಿದೆ. ಅದರ ವಿವರ ಈ ರೀತಿ ಇದೆ.
ಶ್ರೀಮಚ್ಚಾಳುಕ್ಯವಂಶವೆಂಬ ಆಕಾಶಕ್ಕೆ ಚಂದ್ರನೆಂಬಂತೆ ಕಾಂತಿಯಿಂದ ಕೂಡಿ ಈ ಭೂಮಿಯಲ್ಲಿ ತನ್ನ ಕುಲಕ್ಕೆ ಶಿಖಾಮಣಿಯಾದ ಯುದ್ಧಮಲ್ಲನು ಪ್ರಸಿದ್ಧನಾದನು... ಪ್ರಬಲನಾದ ಆತನು ತೋಳಬಲದ ಖ್ಯಾತಿಯನ್ನು ಪಡೆದು ಅನೇಕ ರಾಜರ ರತ್ನಕಿರೀಟಗಳ ಕಾಂತಿಯಿಂದ ತನ್ನ ಪಾದಗಳು ಬೆಳಗುವಂತೆ ಮಾಡಿ ಸಪಾದ ಲಕ್ಷ ಕ್ಷಿತಿಯನ್ನು ಆಳಿದನು. ಇವನು ಬೋದನವೆಂಬ ತನ್ನ ರಾಜಧಾನಿಯಲ್ಲಿ ಪ್ರತಿದಿನವೂ ಬಾವಿಗಳಲ್ಲಿ ಎಣ್ಣೆಯನ್ನು ತುಂಬಿ ಐನೂರು ಆನೆಗಳನ್ನು ಸ್ನಾನಮಾಡಿಸುವನು. ಈ ಯುದ್ಧಮಲ್ಲ ಮಹೀಪತಿಗೆ ಸುಂದರಾಂಗನಾದ ಅರಿಕೇಸರಿಯು ರಾಜನಿಗೆ ಕೀರ್ತಿ ಹುಟ್ಟುವಂತೆ ಹುಟ್ಟಿ ಮಂತ್ರಿಗಳಿಂದ ಕೂಡಿ ತನ್ನ ಕಿತ್ತ ಕತ್ತಿಯಿಂದ ವಿರೋಧಿರಾಜರ ಅಮೂಲ್ಯವಾದ ವಸ್ತುಗಳನ್ನೂ ಆನೆ ಕುದುರೆಗಳನ್ನೂ ಗೆದ್ದು ನಿರುಪಮನೆಂಬ ರಾಜನ ಆಳ್ವಿಕೆಯಲ್ಲಿ ಮೂರು ಕಳಿಂಗ ದೇಶಗಳೊಡನೆ ವೆಂಗಿಮಂಡಲವನ್ನೂ ಗೆದ್ದು ದಿಕ್ಸಿತ್ತಿಗಳಲ್ಲಿ ಗರ್ವದಿಂದ ತನ್ನ ಹೆಸರನ್ನು ಬರೆಯಿಸಿದನು. ಕ್ಷತ್ರಿಯ ಗುಣಗಳು ಆ ಕುಲದಲ್ಲಿ ಈತನಿಂದಲೇ ನೆಲಸಿ ನಿಂದುವು, ಅಲ್ಲದೆ ಅರಿಕೇಸರಿಯು ಮಾಡಿದ ಕಾರ್ಯಗಳು ಮೂರು ಲೋಕದಲ್ಲಿಯೂ ಪ್ರಖ್ಯಾತರಾದ ಆದಿ ಕ್ಷತ್ರಿಯರಲ್ಲಿಯೂ ಇಲ್ಲವೆನ್ನುವಷ್ಟು ಪ್ರಸಿದ್ದಿಯಾದುವು. ಅರಿಕೇಸರಿಗೆ ನರಸಿಂಹ, ಭದ್ರದೇವ ಎಂಬಿಬ್ಬರು ಮಕ್ಕಳಾದರು. ಶತ್ರುರಾಜರ ತಲೆಗಳನ್ನು ಸೀಳುವಷ್ಟು ಭಯಂಕರವಾದ ಕತ್ತಿಗಳನ್ನುಳ್ಳ ಬಾಹುಬಲವುಳ್ಳವರವರು. ಅವರಲ್ಲಿ ಹಿರಿಯನಾದ ನರಸಿಂಹನಿಗೆ ಯುದ್ಧಮಲ್ಲನೆಂಬುವನು ಹಿರಿಯ ಮಗ, ಭುವನಪ್ರದೀಪನೂ ಅವಾರ್ಯವೀರ್ಯನೂ ಆದ ಯುದ್ಧಮಲ್ಲನಿಗೆ ಬದ್ದೆಗನು ಹಿರಿಯ ಮಗ. ಇವನು ಹುಟ್ಟಿದೊಡನೆಯೇ ಜ್ಞಾನವೂ ಜ್ಞಾನದೊಡನೆ ಐಶ್ವರ್ಯವೂ ಅದರೊಡನೆ ಅತ್ಯತಿಶಯವಾದ ಪರಾಕ್ರಮವೂ ಹುಟ್ಟಿದುವು. ತನ್ನ ವಿಶೇಷ ಶಕ್ತಿಯಿಂದ ಶತ್ರುರಾಜರನ್ನು ಚದುರಿಸಿ ರಣರಂಗದಲ್ಲಿ ತನ್ನ ಪರಾಕ್ರಮವನ್ನು ಕೊಂಡಾಡುವ ಹಾಗೆ ನಲವತ್ತೆರಡು ಕಾಳಗಗಳಲ್ಲಿ ಜಯವನ್ನು ಸಂಪಾದಿಸಿದನು. ಸಮುದ್ರ ಮುದ್ರಿತವಾದ ಈ ಭೂಮಂಡಲದಲ್ಲಿ ಯಾರಿಗೂ ಸೋಲದವನು ಇವನೇ ಎಂಬ ಖ್ಯಾತಿಯನ್ನು ಸಂಪಾದಿಸಿದುದಲ್ಲದೆ ಬದ್ದೆಗನು ಭೀಮನೆಂಬ ರಾಜನನ್ನು ಬಹಳ ಗರ್ವದಿಂದ ನೀರಿನಲ್ಲಿ ಮೊಸಳೆಯನ್ನು ಹಿಡಿಯುವಂತೆ ಒತ್ತಿ ಹಿಡಿದನು, ಮುಗಿಲನ್ನು ಮುಟ್ಟಿದ ಪೆಂಪು, ಪೆಂಪನ್ನು ಒಳಕೊಂಡ ಉದ್ಯೋಗ, ಉದ್ಯೋಗದ ಫಲವಾದ ಆಜ್ಞಾಫಲ, ಆಜ್ಞೆಯಿಂದ ಭಯಪಟ್ಟು ಬಾಗಿ ನಿಂತ ಶತ್ರುರಾಜರ ಸಮೂಹ ಇವು ತನ್ನ ಕೀರ್ತಿ ಯಶಸ್ಸಿಗೆ ಆಶ್ರಯವಾಗಿರಲು ಬದ್ದೆಗನು ತನ್ನ ಹುಬ್ಬನ್ನು ಹಾರಿಸುವುದರಿಂದಲೇ ಕೋಟ್ಯಂತರ ಜನವನ್ನು ಅಧೀನಮಾಡಿಕೊಳ್ಳುವನು. ಅವನ ಭಂಡಾರದಲ್ಲಿ ಮೇರುಪರ್ವತದ ಚಿನ್ನವಿದೆ. ಕಲ್ಪವೃಕ್ಷಗಳ ತೋಟವಿದೆ, ಸಿದ್ದರಸದ ಒರತೆಯಿದೆ, ಸ್ಪರ್ಶಶಿಲೆಯ ಗಣಿಯಿದೆ, ತಡೆಯಿಲ್ಲದೆ ದಾನಮಾಡುವವರಲ್ಲಿ ಬದ್ದೆಗನನ್ನು ಹೋಲುವವರಾರಿದ್ದಾರೆ ! ಆ ಭದ್ರದೇವನ ತ್ಯಾಗಕ್ಕೆ ಹೊರಗಾದುದಾವುದೂ ಇರಲಿಲ್ಲ.