________________
ಉಪೋದ್ಘಾತ ಕನ್ನಡ ಸಾಹಿತ್ಯದ ದೃಷ್ಟಿಯಿಂದ ಕ್ರಿ.ಶ.೯-೧೦ನೇ ಶತಮಾನಗಳು ಬಹು ಪ್ರಶಂಸನೀಯವಾದುವುಗಳು. ಈ ಶತಮಾನಗಳ ಹಿಂದೆ ಕನ್ನಡ ಸಾಹಿತ್ಯವು ಯಾವುದೋ ಒಂದು ರೀತಿಯಲ್ಲಿದ್ದಿರಬೇಕು. ರಾಜ್ಯದ ಆಡಳಿತಗಳ ಸಂಘಟ್ಟದಿಂದಲೂ ಸಾಮಾಜಿಕ ಜೀವನದ ಚಳುವಳಿಗಳಿಂದಲೂ ಸಾಹಿತ್ಯದಲ್ಲಿ ಕ್ರಮೇಣ ಬದಲಾವಣೆಗಳು ತೋರಿ ಬರತೊಡಗಿದವು. ಒಂದು ಕಾಲವು ಇನ್ನೊಂದು ಕಾಲವಾಗಿ ಪರಿವರ್ತನೆಯಾಗುವಾಗ ಇವೆರಡು ಕಾಲಗಳ ಸಂಘಟನೆಗಳಿಂದಲೂ ಪರಸ್ಪರ ಸಮಾಗಮಗಳಿಂದಲೂ ಸಮಾಜದಲ್ಲಿ ಅನೇಕ ಹೊಸವಿಚಾರಗಳು ತಲೆದೋರಿ ತತ್ಪಲವಾಗಿ ಕೃತಿಗಳು ಹೊರಬಿದ್ದು ವ್ಯವಹಾರದಲ್ಲಿ ಬರುವುವು. ಆದರೆ ಈ ಎರಡು ಕಾಲಗಳ ಸಂಧಿಸಮಯದಲ್ಲಿ ಸಿಕ್ಕಿಕೊಂಡಿರುವ ಕಾಲದ ಪರಿಸ್ಥಿತಿಯು ಬಹುವಿಲಕ್ಷಣವಾಗಿರುವುದು. ಜನಾಂಗವು ಪೂರ್ವಕಾಲದ ನಡವಳಿಕೆಗಳನ್ನು ಒಂದೇ ಸಲ ಬಿಟ್ಟು ಬಿಡುವುದಿಲ್ಲ. ಇದಕ್ಕೆ ಹೆಚ್ಚು ಕಾಲ ಬೇಕಾಗುತ್ತದೆ. ಈ ಮಧ್ಯೆ ಪೂರ್ವದ ನಡತೆಗಳನ್ನು ಬಿಡದಂತೆಯೂ ಹೊಸ ಚಳುವಳಿಗಳನ್ನು ಸಂಪೂರ್ಣವಾಗಿ ನಿರಾಕರಿಸದಂತೆಯೂ ಹಾಗೂ ಹೀಗೂ ಇರತಕ್ಕದ್ದು ಸ್ವಭಾವ. ಕ್ರಮೇಣ ಹಳೆಯ ಚಾಳಿಗಳೆಲ್ಲ ಮಾಯವಾಗಿ ನವೀನ ಪದ್ಧತಿಗಳು ಸಮಾಜದಲ್ಲಿ ಊರಿಕೊಳ್ಳುವುವು. ಆಮೇಲೆ ಅವುಗಳಿಗೆ ಪೂರ್ಣ ಆಶ್ರಯವು ದೊರೆತು ಅವುಗಳು ಸರ್ವತೋಮುಖವಾಗಿ ಬೆಳೆದು ತತ್ಕಾಲದ ಪ್ರಚಲಿತ ಪದ್ಧತಿಗಳಾಗಿ ಪರಿಣಮಿಸುವುವು. ಕರ್ಣಾಟಕದ ಹತ್ತನೆಯ ಶತಮಾನದ ಸ್ಥಿತಿಯೂ ಹೀಗೆಯೇ. ೯-೧೦ನೆಯ ಶತಮಾನಗಳ ಹಿಂದೆ ಕರ್ಣಾಟಕ ಸಾಹಿತ್ಯವು ಹೇಗಿತ್ತೆಂಬುದನ್ನು ಖಚಿತವಾಗಿ ನಿರ್ಧರಿಸಲು ಸಾಕಷ್ಟು ಸಲಕರಣೆಗಳು ಇನ್ನೂ ದೊರೆತಿಲ್ಲ . ಲಬ್ದವಾದ ಕೆಲವು ಗ್ರಂಥಗಳ ಸಹಾಯದಿಂದಲೂ ಶಾಸನಗಳ ನೆರವಿನಿಂದಲೂ ಹೇಗಿದ್ದಿತೆಂಬುದನ್ನು ಊಹಿಸಲು ಅವಕಾಶವಿದೆ.
ಸುಮಾರು ಕ್ರಿ.ಪೂ. ಎರಡನೆಯ ಶತಮಾನದಲ್ಲಿ ಉತ್ತರದೇಶದಲ್ಲಿ ತಲೆದೋರಿದ ವೀರಕ್ಷಾಮದ ನಿಮಿತ್ತ ದಕ್ಷಿಣಕ್ಕೆ ವಲಸೆ ಬಂದ ಭದ್ರಬಾಹುವಿನ ತಂಡದವರು ಅಲ್ಲಿಂದ ಮುಂದಕ್ಕೆ ತಮ್ಮ ದಿಗಂಬರಪಂಥವನ್ನು ದಕ್ಷಿಣದಲ್ಲಿ ಬೆಳಸಿಕೊಂಡು ಬಂದರು. ಶ್ರವಣ ಬೆಳುಗೊಳವು ಅವರ ಕೇಂದ್ರವಾಯಿತು. ಅಲ್ಲಿಂದ ಅವರು ತಮ್ಮಧರ್ಮಪ್ರಸಾರವನ್ನು ಉದಾರವಾಗಿ ಮಾಡತೊಡಗಿದರು. ವೈಧಿಕಧರ್ಮಕ್ಕೆ ನೇರವಿರೋಧವಾಗಿದ್ದ ಬೌದ್ಧ ಜೈನಧರ್ಮಗಳಲ್ಲಿ ಬೌದ್ಧಮತವು ಜನರ ಮೇಲೆ ವಿಶೇಷ ಪ್ರಭಾವಶಾಲಿಯಾಗದೆ ೮-೯ನೆಯ ಶತಮಾನದ ವೇಳೆಗೆ ನಾಮಾವಶೇಷವಾಗಿರಬೇಕು. ಜೈನರಿಗೆ ಹಿಂದೆ, ಕರ್ಣಾಟಕದಲ್ಲಿ ದ್ರಾವಿಡಸಂಸ್ಕೃತಿಯೂ ಒಂದು ಬೌದ್ಧಸಾಹಿತ್ಯವೂ ಇದ್ದಿರಬೇಕು. ಇವೆರಡೂ ಆ ಕಾಲಕ್ಕೆ ಹಿಂದೆಯೇ ಮಾಯವಾಗಿರಬೇಕು. ಜೈನರಾದರೋ ಬೌದ್ದರಂತಲ್ಲದೆ ತಮ್ಮ ಮತ ಧರ್ಮಗಳನ್ನು ದೇಶಕಾಲಕ್ಕೆ ಅನ್ವಯಿಸುವಂತೆ ಮಾರ್ಪಡಿಸಿಕೊಂಡು ಅವುಗಳಿಂದ ತಾವೂ ಪ್ರಭಾವಿತರಾಗಿ ದೇಶೀಯರ ಮನಸ್ಸನ್ನು ಆಕರ್ಷಿಸಿದರು. ಜೈನ ಸಂನ್ಯಾಸಿಗಳು ವಿರಕ್ತರೂ ಆಚಾರಶೀಲರೂ ಆಗಿದ್ದುದರಿಂದ ರಾಜ ನಿರ್ಮಾಪಕರಾಗಿ