________________
ಅಧ್ಯಕ್ಷರ ನುಡಿ ಕನ್ನಡ ಸಾಹಿತ್ಯ ಪರಿಷತ್ತು ನಾಡು, ನುಡಿ, ಸಂಸ್ಕೃತಿಗಳ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಶ್ರಮಿಸುತ್ತಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ೧೯೧೫ ರಿಂದ ಇಲ್ಲಿಯವರೆಗಿನ ಸುದೀರ್ಘ ಇತಿಹಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಾರ್ಯಕ್ಷೇತ್ರವನ್ನು ವೈವಿಧ್ಯಮಯವಾಗಿ ವಿಸ್ತರಿಸಿಕೊಂಡಿದೆ. ಅದರಲ್ಲಿ ಕನ್ನಡಿಗರಿಗೆ ಅತ್ಯುತ್ತಮ ಸಾಹಿತ್ಯವನ್ನು ಕಾಲಕಾಲಕ್ಕೆ ಒದಗಿಸಿಕೊಡುವುದೂ ಪ್ರಮುಖವಾದುದಾಗಿದೆ. ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಒಳಗೊಳ್ಳುವಂಥ ಸಾವಿರಾರು ಕೃತಿಗಳನ್ನು ಪರಿಷತ್ತು ಹೊರತಂದಿದೆ. ಜನರಿಗೆ ಬೇಕಾದ ಉಪಯುಕ್ತ ಹಾಗೂ ಮೌಲಿಕ ಕೃತಿಗಳನ್ನು ಕನ್ನಡಿಗರಿಗೆ ಕೊಡಬೇಕೆನ್ನುವ ಎಚ್ಚರವನ್ನು ಪರಿಷತ್ತು ಕಾದುಕೊಂಡಿದೆ. ಕನ್ನಡ ಭಾಷೆ, ಲಿಪಿ, ಸಂಸ್ಕೃತಿ ಕುರಿತ ಗ್ರಂಥಗಳು, ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳ ಗದ್ಯಾನುವಾದಗಳು, ಕವಿಕಾವ್ಯ ವಿಚಾರ ಸಂಕಿರಣಗಳ ಪ್ರಬಂಧಗಳು, ಜೀವನ ಚರಿತ್ರೆ, ಜಾನಪದ, ಶಾಸನ, ಆರೋಗ್ಯ ವಿಜ್ಞಾನ, ಮನೋವಿಜ್ಞಾನದಂಥ ವಿಭಿನ್ನ ಪ್ರಕಾರಗಳ ಪುಸ್ತಕಗಳನ್ನು ಪ್ರಕಟಿಸುವಲ್ಲಿ ಆಸಕ್ತಿ ತೋರಿದೆ. ಬೇಡಿಕೆ ಹೆಚ್ಚಾಗಿರುವ ಮತ್ತು ಮಾರಾಟವಾದ ಪುಸ್ತಕಗಳನ್ನು ಮರುಮುದ್ರಣದ ಮೂಲಕ ಸಹೃದಯರಿಗೆ ತಲುಪಿಸುತ್ತಿದೆ.
- ಪ್ರಸ್ತುತ 'ಪಂಪ ಮಹಾಕವಿ ವಿರಚಿತ ಪಂಪ ಭಾರತಂ' (ವಿಕ್ರಮಾರ್ಜುನ ವಿಜಯಂ) ಗ್ರಂಥವು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಖಿಲ ಭಾರತ ೮೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮರುಮುದ್ರಣವಾಗುತ್ತಿರುವುದು ಹೆಮ್ಮೆಯ ಸಂಗತಿ. ಎಂದಿನ ಪ್ರೀತ್ಯಾದರಗಳಿಂದ ಈ ಕೃತಿಯನ್ನು ಸಹೃದಯ ಕನ್ನಡಿಗರು ಸ್ವೀಕರಿಸುತ್ತಾರೆಂದು ನಂಬಿದ್ದೇನೆ. ಪುಸ್ತಕವನ್ನು ಅಚ್ಚುಕಟ್ಟಾಗಿ ಮುದ್ರಿಸಿದ ಬಿ.ಎಂ.ಶ್ರೀ. ಅಚ್ಚುಕೂಟದ ಸಿಬ್ಬಂದಿ ವರ್ಗಕ್ಕೂ, ಈ ಕೆಲಸದಲ್ಲಿ ಸಹಕರಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು.
೦೧-೧೦-೨೦೧೬
ಡಾ. ಮನು ಬಳಿಗಾರ್
ಅಧ್ಯಕ್ಷರು