________________
ಉಪೋದ್ಘಾತ | ೩೩ ಅಚ್ಚಗನ್ನಡಶೈಲಿಯಲ್ಲಿ ಬರೆಯುವುದು ಇನ್ನೂ ಅವನ ಕಾಲಕ್ಕೆ ರೂಢಿಗೆ ಬಂದಿರಲಿಲ್ಲ. ಅಷ್ಟೇ ಅಲ್ಲದೆ ಸಂಸ್ಕೃತಪಂಡಿತರಾದ ಕನ್ನಡ ಕವಿಗಳು ತಮ್ಮ ಕನ್ನಡ ಕಾವ್ಯಗಳಲ್ಲಿಯೂ ಸಂಸ್ಕೃತವನ್ನು ತುಂಬುವುದು ಒಂದು ಗುಣವೆಂದು ಭಾವಿಸಿದ್ದರು. ಆದುದರಿಂದ ಪಂಪನ ಕಾವ್ಯವು ಸಂಸ್ಕೃತಮಯವಾಗಿರುವುದು ಆಶ್ಚರ್ಯವೇನೂ ಅಲ್ಲ. ಅವನು ಕೆಲವೆಡೆಗಳಲ್ಲಿ ಪೂರ್ಣವಾಗಿ ಸಂಸ್ಕೃತವೃತ್ತಗಳನ್ನೇ ರಚಿಸಿರುವನು. ಮುಂದಿನ ಈಶ್ವರನ ಪ್ರಾರ್ಥನೆಯನ್ನು
ನೋಡಿ:
ಪ್ರಚಂಡಲಯತಾಂಡವ ಕ್ಷುಭಿತಯಾಶು ಯಾನಯಾ ಸದಿಳಯಯಾ ಭುವಾ ಸಗಿರಿ ಸಾಕಾರದ್ವೀಪಯಾ ಕುಲಾಲಕರನಿರ್ಭರ ಭ್ರಮಿತ ಚಕ್ರಲೀಲಾಯಿತಂ ಸಸರ್ವಜಗತಾಂ ಗುರುಃ, ಗಿರಿಸುತಾಪತಿಃ ಪಾತು ವಃ ||
ಆದಿಪುರಾಣದಲ್ಲಿ ಬರುವ ಮುಂದಿನ ಆರೋಗಣೆಯ ವರ್ಣನೆಯು ಅವನ ಸಂಸ್ಕೃತ ಗದ್ಯದ ವೈಖರಿಯನ್ನು ವಿಶದಪಡಿಸುವುದು.
ಭರತಮಹೀಶಂ ಭೋಜನಭೂಮಿಗೆ ರಾಜಹಂಸವಿಳಾಸದಿಂ ಬಿಜಯಂಗೆಯು ಸಕಲ ವಿದ್ಯಾಪ್ರವೀಣಗುರುಜನಾರ್ಯಜನವಿಳಾಸಿನೀಜನಪರಿವೃತನ್ ಅತಿಮೃದುರಸನಾಮರ್ದನ ಮಾತ್ರ ದ್ರಾವಣೀಯಧೃತಪೂರಮುಮಂ ಅಲ್ಲದಶನದಂಶಮಾತ್ರಖಂಡನೀಯಮಂಡಕಮುಮಂ ಅತ್ಯಂತ ಕೋಮಲತಾಲುತಳಸಂಘಟ್ಟ ಮಾತ್ರಕ್ಕೇದನೀಯಮೋದಕಮುಮಂ, ಅನಿಷ್ಠುರೋ ಪುಟಮಧ ಸಂಧಾರಣಮಾತಚೂರ್ಣನೀಯಶಾಕವರ್ತಿಕಮುಮಂ, ಅತಿ ದೂರೋಚ್ಛಾಸ ವಿಕಾಸನಾಸಾಂಜಲಿಪುಟ ಪೀಯಮಾನದುಗ್ಧ ಹಯ್ಯಂಗವೀನಮುಮಂ, ನೀಹಾರಶಕಲಧವಲಪರಿಣತಕಪಿತ್ಥಫಲಪರಿಮಳ ಮಧುರದಧಿಯುಮಂ, ಏಕೀಭೂತಸಕಲಭುವನಶಿಶಿರ ದ್ರವ್ಯಸಂಚಾರದ್ರವ ಶಂಖಾಕಾರ ಶಿಖರಿಣೀರಮಣೀಯಮುಂ ಅಮೃತಪಿಂಡಾಯಮಾನ ಅಪಿಂಡದುಗ್ಧಸ್ನಿಗ್ಧಮುಮಪ್ಪ ಮನೋ
ಹರಾಹಾರಮಂ ||
ಪಂಪಭಾರತದಲ್ಲಿಯೇ ಹದಿನಾಲ್ಕನೆಯ ಆಶ್ವಾಸದಲ್ಲಿ ಅರಿಗನಿಗೆ ವಂದಿಮಾಗಧರು ಓದುವ ಮಂಗಳವೃತ್ತಗಳು ಸಂಪೂರ್ಣವಾಗಿ ಸಂಸ್ಕೃತಶ್ಲೋಕಗಳಾಗಿಯೇ ಇವೆ.
ಆದರೂ ಪಂಪನಿಗೆ ಅದರ ಇತಿ ಮಿತಿ ಗೊತ್ತು. ಅದಕ್ಕಾಗಿಯೇ ಅವನು ಪುರಾಣ ಕಾವ್ಯವಾದ 'ಆದಿಪುರಾಣ'ದಲ್ಲಿ ತುಂಬಿರುವಷ್ಟು ಸಂಸ್ಕೃತಶಬ್ದಗಳನ್ನೂ ಪಾರಿಭಾಷಿಕ ನುಡಿಗಟ್ಟನ್ನೂ ಲೌಕಿಕ ಕಾವ್ಯವಾದ 'ವಿಕ್ರಮಾರ್ಜುನ ವಿಜಯ'ದಲ್ಲಿ ತುಂಬಿಲ್ಲ. ಸಂಸ್ಕೃತ ಶಬ್ದಗಳಿಂದ ಒಂದು ವಿಧವಾದ ಘೋಷವೂ, ಆರ್ಭಟವೂ, ಢಣಢಣತ್ಕಾರವೂ ಬರುವುದೆಂಬುದು ಆತನಿಗೆ ತಿಳಿದ ವಿಷಯ. ಆದುದರಿಂದ ವೀರರಸಪ್ರಧಾನವಾದ ಭೇರಿಯ ನಾದ, ಧೀರ ಪ್ರತಿಜ್ಞೆ, ಘೋರಯುದ್ಧ ಜಯಘೋಷಣ-ಈ ಸಂದರ್ಭಗಳಲ್ಲಿ ಮಾತ್ರ ಸಂಸ್ಕೃತ ಶಬ್ದಗಳನ್ನು ಉಪಯೋಗಿಸಿಕೊಂಡು ಮಿಕ್ಕೆಡೆಗಳಲ್ಲೆಲ್ಲ ಕನ್ನಡ ಪದಗಳನ್ನೇ ಉಪಯೋಗಿಸಿ ಉತ್ಕೃಷ್ಟ ಭಾಷಾಸರಣಿಯಲ್ಲಿ ಕಾವ್ಯವನ್ನು ರಚಿಸಿದ್ದಾನೆ. ಇವನ ಗ್ರಂಥಗಳಲ್ಲಿ-ಅದರಲ್ಲಿಯೂ ಪಂಪಭಾರತದಲ್ಲಿ ಸಿಕ್ಕುವಷ್ಟು ಅಚ್ಚಗನ್ನಡ ಶಬ್ದಗಳು ಮತ್ತಾವ ಕನ್ನಡ ಕೃತಿಗಳಲ್ಲಿಯೂ ಸಿಕ್ಕಲಾರದೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಆದರೂ