SearchBrowseAboutContactDonate
Page Preview
Page 13
Loading...
Download File
Download File
Page Text
________________ ಯಶೋಧರ ಚರಿತೆ ಅಮೃತಮತಿಗೆ ತನ್ನ ವ್ಯಭಿಚಾರವು ರಾಜನಿಗೆ ಗೊತ್ತಾಯಿತೆಂದು ತಿಳಿದುಬಂದಾಗ ಅವನ ಕೋಲೆಗೂ ಮುಂದಾಗುತ್ತಾಳೆ; ವಿಷವಿಕ್ಕಿ ಕೊಲ್ಲುತ್ತಾಳೆ. ತನ್ನ ಕಾಮಕ್ಕೆ ಅಡ್ಡಿಯಾಗುವವನ ಮೇಲೆ ಕ್ರೋಧವುಂಟಾದುದು ಇದಕ್ಕೆ ಕಾರಣ. ಅನಂತರ ತನ್ನ ಅರಮನೆಯಲ್ಲೇ ಆ ಬದಗನನ್ನು ಇರಿಸಿಕೊಳ್ಳುತ್ತಾಳೆ. ಇದನ್ನು ಆಕೆಯ ಮಗ ಯಶೋಮತಿ ಏಕೆ ತಡೆಯಲಿಲ್ಲವೋ ತಿಳಿಯುವುದಿಲ್ಲ. ಅವನಿಗೆ ಗೊತ್ತಿಲ್ಲದೆ ಇದು ನಡೆದುದೂ ಅಲ್ಲ. ಸಾಮಾನ್ಯಜನರೂ ಅಮೃತಮತಿಯ ನೀಚವರ್ತನೆಯ ಕುರಿತು ಆಡಿಕೊಳ್ಳುತ್ತಿದ್ದರೆಂಬುದರಿಂದ ಇದು ಸಿದ್ದವಾಗುತ್ತದೆ. ಅದೂ ಅಲ್ಲದೆ, “ತೊನ್ನನ ಕೂಟದಿಂದ ನಿನಗೂ ತೊನ್ನು ಉಂಟಾಗಿದೆ; ಈ ರೋಗಕ್ಕೆ ಮದ್ಯಮಾಂಸಗಳು ವಿಷ'ವೆಂದು ಹೇಳಿದರೂ ಅವಳು ಮಗನ ಮಾತನ್ನು ಮನ್ನಿಸಲಿಲ್ಲವಂತೆ! ಎನ್ನುವಾಗ ಅವನಿಗೂ ಅವಳನ್ನು ತಡೆಯುವ ಅಥವಾ ಅವಳನ್ನು ದಂಡಿಸುವ ಸಾಮರ್ಥ್ಯವಿರಲಿಲ್ಲವೆ? ಅಥವಾ ಅವನೂ ಯಶೋಧರನಂತೆ 'ಮಾತೃದೇವನಾಗಿ ಉಳಿದುಕೊಂಡನೆ ? ಹೇಗೆ ಹೇಳುವುದು ? ಅಂತೂ ಅಮೃತಮತಿ ಬರಿಯ ಕಾಮುಕ ಸ್ತ್ರೀ; ಅವಳಿಗೆ ಬದಗನ ಇಂಪಾದ ಹಾಡೇ ಮರುಳುಗೊಳಿಸುವ ಆಕರ್ಷಣೆಯಾಯಿತು. ಹಾಗೆ ಹುಚ್ಚಾದ ಅವಳು ತಾನಾಗಿ “ತಿಳಿ'ಯಾಗಲಿಲ್ಲ; ಉಳಿದವರು 'ತಿಳಿ'ಯಾಗಿಸಲು ಯತ್ನಿಸಲಿಲ್ಲ; ಯತ್ನಿಸಿದ್ದಿರ ಬಹುದಾದರೂ ಅವರಾರೂ ಸಫಲರಾಗಲಿಲ್ಲ. ಅವಳು ಕಾಮದ ಕೈಗೊಂಬೆಯಾಗಿ, ಅದಕ್ಕೆ ಅಡ್ಡಿಯಾಗಬಹುದಾಗಿದ್ದ ಗಂಡನನ್ನೂ ಅತ್ತೆಯನ್ನೂ ವಿಷವಿಕ್ಕಿ ಕೊಲ್ಲುವ ಕ್ರೋಧಕ್ಕೆ ಒಳಗಾಗಿ, ಬದುಕಿದ್ದಾಗಲೇ ಕುಷ್ಠದಿಂದ ಕೊಳೆತು, ಸತ್ತಮೇಲೆ ಧೂಮಪ್ರಭೆಯೆಂಬ ಐದನೆಯ ನರಕದಲ್ಲಿ ಮುಳುಗಿದಳು. - ಬದಗನನ್ನು ಒಲಿದು ಅವಳು ಅವನನ್ನೆ ಅಂತ್ಯಕಾಲದವರೆಗೂ ಬಿಡದೆ ಆರಾಧಿಸಿದ ಕಾರಣ ಅವಳ ಪ್ರಣಯ ಶುದ್ಧಪ್ರಣಯವೆನ್ನಬಹುದೆ ? ಹಾಗೆ ಹೇಳಬಹು ದೆಂದಾದರೆ ಅಧರ್ಮದ ವರ್ತನೆಯೆಲ್ಲವನ್ನೂ ಸರಿಯೆಂದು ಸಮರ್ಥಿಸುವುದಕ್ಕೆ ಸಾಧ್ಯವಾಗದೆ ? ಹೋಗಲಿ. ಅವನಾದರೂ ಅವಳನ್ನು ಒಲಿದಿದ್ದನೆ? ಇಲ್ಲ; ಒದೆದಿದ್ದ! ವಾಲ್ಮೀಕಿರಾಮಾಯಣದ ಸುಂದರಕಾಂಡದಲ್ಲಿ ಈ ಮಾತು ಬರುತ್ತದೆ: ಅಕಾಮಾಂ ಕಾಮಯಾನಸ್ಯ ಶರೀರಶುಪತವ್ಯತೇ | ಇಚ್ಛತಾಂ ಕಾಮಯಾನಸ್ಯ ಪ್ರೀತಿರ್ಭವತಿ ಶೋಭನಾ 11 . (ವಾಲ್ಮೀಕಿ ರಾಮಾಯಣ : ಸರ್ಗ ೨೨, ಶ್ಲೋ ೪೨) (ಕಾಮವಿಲ್ಲದವಳನ್ನು ಕಾಮಿಸುವುದರಿಂದ, ದೇಹಕ್ಕೆ ಸಂಕಟವೇ ಹೊರತು ಸುಖವಿಲ್ಲ. ತಾನಾಗಿ ಇಷ್ಟಪಟ್ಟು ಕಾಮಿಸಿ ಬಂದವಳನ್ನು ಆದರಿಸುವುದರಿಂದ ಸಂತೋಷವೂ ಹೆಚ್ಚು ಅಮೃತಮತಿ ತಾನಾಗಿ ಕಾಮಿಸಿ ಬಂದಳೆಂದು ಅಷ್ಟವಂಕನು ಅವಳನ್ನು ಆದರಿಸಲಿಲ್ಲವೆಂದಾದಮೇಲೆ ಅವನಿಗೆ ಸಂತೋಷವೂ ಇದ್ದಿರಲಾರದು.
SR No.034021
Book TitleYasodhara Carita
Original Sutra AuthorN/A
AuthorJanna
PublisherKannada Sahitya Parishattu
Publication Year2015
Total Pages536
LanguageKannada
ClassificationBook_Other & Kavya
File Size16 MB
Copyright © Jain Education International. All rights reserved. | Privacy Policy